ಬೆಳಗಾವಿ: ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರರ ನಡುವೆ ವಾಗ್ದಾಳಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಹೀಗಾಗಿ ಸಂಧಾನಕ್ಕೆ ಮತ್ತೊಬ್ಬ ಸಹೋದರ, ಅರಭಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದಾರೆ.
ಗೋಕಾಕ್‍ನಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಜಾರಕಿಹೊಳಿ ಮಹಾಭಾರತವನ್ನು ಇಲ್ಲಿಗೆ ಮುಗಿಸಬೇಕು ಎಂದು ನಿರ್ಧಾರ ಮಾಡಿದ್ದೇನೆ. ಎಲ್ಲರೂ ಕೂಡಿ ಇರಬೇಕು, ನಗಬೇಕು ಎನ್ನುವುದು ನನ್ನ ಇಚ್ಛೆಯಾಗಿದೆ. ಈ ನಿಟ್ಟಿನಲ್ಲಿ ಸಂಧಾನ ನಡೆಸುತ್ತಿರುವೆ ಎಂದು ತಿಳಿಸಿದ್ದಾರೆ.
Advertisement
Advertisement
ಸತೀಶ್, ರಮೇಶ್ ಮತ್ತು ಲಖನ್ ಜಾರಕಿಹೊಳಿ ಮೂವರ ಜೊತೆಗೂ ನಾನು ಮಾತನಾಡಿದ್ದೇನೆ. ರಾಜಕೀಯವಾಗಿ ಏನೇ ಆಗಲಿ ಕುಟುಂಬದ ವಿಚಾರವಾಗಿ ಮಾಧ್ಯಮದ ಮುಂದೆ ಹೋಗದಿರಲು ಮನವಿ ಮಾಡಿದ್ದೇನೆ. ಎಲ್ಲರೂ ಕುಳಿತು ಕುಟುಂಬದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿರುವೆ ಎಂದರು.
Advertisement
ಈಗಾಗಲೇ ನಮ್ಮ ನಾಯಕರು ಮೇ 23ರ ವರೆಗೆ ಕಾಯಿರಿ ಎಂದು ಹೇಳಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರನ್ನು ಸೇರಿದಂತೆ ಎಲ್ಲ ಪಕ್ಷದ ನಾಯಕರು ಸುಮ್ಮನೆ ಇದ್ದರೆ ಉತ್ತಮವಾಗುತ್ತದೆ. ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯ ರಾಜಕಾರಣದಲ್ಲಿ ಖಂಡಿತವಾಗಿ ಬದಲಾವಣೆ ಆಗುತ್ತದೆ ಎಂದು ಪರೋಕ್ಷವಾಗಿ ಬಿಜೆಪಿ ಅಧಿಕಾರ ಹಿಡಿಯುವ ಸುಳಿವು ಬಿಚ್ಚಿಟ್ಟರು.