– ಡಿಕೆಶಿಗೆ ಒಕ್ಕಲಿಗರು, ಗೌಡ್ರ ಕುಟುಂಬದ ಓಲೈಕೆ ಆಸೆ ಇರಬಹುದು
ಚಿಕ್ಕೋಡಿ (ಬೆಳಗಾವಿ): ಫೋನ್ ಟ್ಯಾಪಿಂಗ್ ವಿಚಾರವಾಗಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ನೆರೆ ವೀಕ್ಷಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ.ಬಿ.ಪಾಟೀಲ್ ಅವರು, ಫೋನ್ ಕದ್ದಾಲಿಕೆ ಆಗಿದ್ದರೆ ತನಿಖೆ ಆಗಲಿ. ಅದರಲ್ಲಿ ರಾಜಕೀಯ ಏನಿದೆ? ಜಾತಿ ರಾಜಕಾರಣದ ಆಧಾರದ ಮೇಲೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬ ಓಲೈಕೆಗಾಗಿ ಹೇಳಿಕೆ ನೀಡಿರಬಹುದು. ನಾನು ಸಹ ಒಬ್ಬ ಜವಾಬ್ದಾರಿಯುತ ನಾಯಕ, ಡಿಕೆ ಶಿವಕುಮಾರ್ ಅವರು ಕೂಡ ಒಬ್ಬ ಪ್ರಭಾವಿ ನಾಯಕರಾಗಿದ್ದಾರೆ. ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡದಂತೆ ಸಲಹೆ ನೀಡುತ್ತೇನೆ ಎಂದು ಗುಡುಗಿದರು. ಇದನ್ನೂ ಓದಿ: ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ
ಸ್ನೇಹಿತ ಡಿ.ಕೆ.ಶಿವಕುಮಾರ್ ಹಾಗೂ ನಾನು ಒಂದೇ ಪಕ್ಷದಲ್ಲಿ ಇದ್ದೇವೆ. ಒಕ್ಕಲಿಗರು, ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಓಲೈಸುವ ಆಸೆ ಡಿಕೆ ಶಿವಕುಮಾರ್ ಅವರಿಗೆ ಇರಬಹುದು. ಆದರೆ ನಾನು ಯಾವತ್ತೂ ಅದನ್ನು ಬಯಸಿಲ್ಲ. ನನ್ನ ವಿರುದ್ಧ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾವು ಹಳ್ಳಿಪಳ್ಳಿಯಲ್ಲಿದ್ದವರು, ಎಂಬಿಪಿ ಹೇಳಿಕೆಯನ್ನು ಪ್ರಸಾದವಾಗಿ ಸ್ವೀಕರಿಸುತ್ತೇನೆ: ಡಿಕೆಶಿ
ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ನಡೆಸಿ, ವರದಿ ಪಡೆದ ಮೇಲೆ ಸತ್ಯ ಬೆಳಕಿಗೆ ಬರುತ್ತದೆ. ಸತ್ಯಾಸತ್ಯತೆ ತಿಳಿಯದೆ ಆರೋಪ ಮಾಡುವುದು, ಹಗುರವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಡಿಕೆಶಿ ಹೇಳಿದ್ದೇನು?:
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿಕೆಶಿ, ಯಾವ ಫೋನ್ ಕೂಡ ಟ್ಯಾಪಿಂಗ್ ಆಗಿಲ್ಲ. ಮಾಧ್ಯಮಗಳಿಗೆ ಅದು ಹೇಗೆ ಸಿಗ್ತೋ ಗೊತ್ತಿಲ್ಲ. ನಾನು ಇದರ ಬಗ್ಗೆ ವಿಚಾರಿಸಿದ್ದೇನೆ. ಸಿಎಂ ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಹೇಳಿದ್ದರು.
ಫೋನ್ ಟ್ಯಾಪಿಂಗ್ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪ ಮಾಡಿದ್ದಾರೆ. ಹಿಂದಿನ ಗೃಹ ಸಚಿವರಿಗೆ ರಾಜಕಾರಣ ಬೇಕಾಗಿದೆ. ಹಾಗಾಗಿ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಮೇಲೆಲ್ಲ ರೇಡ್ ಗಳು ನಡೆದಿದೆ. ಆಗ ನಮ್ಮ ಮೇಲೆ ಸುಖಾಸುಮ್ಮನೆ ಟ್ಯಾಪಿಂಗ್ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಅವರು ಏನೇನು ಮಾಡಿದ್ದಾರೆ ಅನ್ನೋದು ಗೊತ್ತಿದೆ, ಏನ್ ಬೇಕೋ ಮಾಡಲಿ, ಹೇಳಲಿ. ಬಿಜೆಪಿಯವರು ನಮ್ಮ ಫೋನ್ ಕದ್ದಾಲಿಸಿದ್ದಾರೆ ಎಂದು ತಿಳಿಸಿದ್ದರು.