ಬೆಳಗಾವಿ: ಘಟಪ್ರಭಾ ನದಿಯ ಪ್ರವಾಹದ ಅಬ್ಬರಕ್ಕೆ ಬೆಳಗಾವಿಯ ಮಸಗುಪ್ಪಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ.
ಸಾವಿರಾರು ಮನೆಗಳ ಸುತ್ತಮುತ್ತ ಸಾಗರ ರೀತಿಯಲ್ಲಿ ನೀರು ಆವರಿಸಿಕೊಂಡಿದೆ. ಮಸಗುಪ್ಪಿ ಗ್ರಾಮದ ಸುತ್ತಮುತ್ತ ಗ್ರಾಮದ ಜಲಭಾಧೆಯಲ್ಲಿ ಜರ್ಜರಿತವಾಗಿದೆ. ನೀರು ಆವರಿಸಿದ ಗ್ರಾಮದ ದೃಶ್ಯ ಗಳು ಪಬ್ಲಿಕ್ ಟಿವಿಯ ಡ್ರೋಣ ಕ್ಯಾಮರಾದಲ್ಲಿ ಸೆರೆಯಾಗಿವೆ.
ಖಾನಾಪುರ ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ (Savadatti) ತಾಲೂಕಿನಲ್ಲಿನ ನವಿಲುತೀರ್ಥ ಜಲಾಶಯದಿಂದ (Naviluteertha Dam) ನೀರು ಬಿಡುಗಡೆ ಮಾಡಲಾಗಿದೆ.
ಮಲಪ್ರಭಾ ನದಿಗೆ (Malaprabha River) ಅಡ್ಡಲಾಗಿ ಮುನವಳ್ಳಿ ಸಮೀಪ ಕಟ್ಟಲಾಗಿರುವ ನವೀಲುತೀರ್ಥ ಜಲಾಶಯ 2079.50 ಅಡಿ ಇದ್ದು ಈಗಾಗಲೇ 2072 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ 7 ಅಡಿ ಬಾಕಿ ಇರುವುದರಿಂದ ಜಲಾಶಯದಿಂದ ನೀರು ಬಿಡಲಾಗಿದೆ. ಮಲಪ್ರಭಾ ನದಿಗೆ 20 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಹಾಗಾಗಿ ನವೀಲುತೀರ್ಥ ಜಲಾಶಯದಿಂದ 5000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಮಸಗುಪ್ಪಿ ಗ್ರಾಮ ಜಲಾವೃತ
ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ರಾಮದುರ್ಗ, ಮುನವಳ್ಳಿ ಸೇರಿದಂತೆ ಮಲಪ್ರಭಾ ತೀರದ ಜನರಿಗೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಮೊಸಳೆ ಪ್ರತ್ಯಕ್ಷ: ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿ ತಟದಲ್ಲಿ ಬೃಹತ್ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಬೈಲಹೊಂಗಲ ತಾಲೂಕಿನ ಮಾಟೋಳ್ಳಿ ಗ್ರಾಮದ ಬಳಿ ನದಿ ದಂಡೆಯ ಮೇಲೆ ಕಾಣಿಸಿಕೊಂಡಿದ್ದು, ಮೊಬೈಲ್ ನಲ್ಲಿ ಸ್ಥಳೀಯರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಮೊಸಳೆ ಪ್ರತ್ಯಕ್ಷದಿಂದ ಈ ಭಾಗದ ರೈತರಲ್ಲಿ ಆತಂಕ ಮೂಡಿದೆ. ಹಾಗಾಗಿ, ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಪತ್ತೆ ಹಚ್ಚುವಂತೆ ಇಲ್ಲಿನ ಜನರು ಮನವಿ ಮಾಡಿಕೊಂಡಿದ್ದಾರೆ.