– ಮಗನನ್ನ ನೋಡಲು ಹೋಗಿ ಬಲಿಯಾದ
ಬೆಳಗಾವಿ: ಮಹಿಳೆಯೊಬ್ಬಳು ಪೋಷಕರೊಂದಿಗೆ ಸೇರಿ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನು ಅಟ್ಟಾಡಿಸಿ ಕೊಲೆಗೈದ ಘಟನೆ ನಗರದಲ್ಲಿ ನಡೆದಿದೆ.
ಬೆಳಗಾವಿಯ ಲಕ್ಷ್ಮೀ ನಗರದ ನಿವಾಸಿ ಕಿರಣ್ ಲೊಕರೆ (28) ಕೊಲೆಯಾದ ಪತಿ. ಪತ್ನಿ ಸವಿತಾ, ಮಾವ ವಿಠ್ಠಲ್, ಅತ್ತೆ ಸುರೇಖಾ, ಭಾಮೈದ ಜ್ಯೋತಿಬಾ ಕೊಲೆಗೈದ ಆರೋಪಿಗಳು. ಕಿರಣ್ ಎರಡು ವರ್ಷದ ಮಗನನ್ನು ನೋಡಲು ಹೋದಾಗ ಘಟನೆ ನಡೆದಿದೆ.
ಲಕ್ಷ್ಮೀ ನಗರದ ನಿವಾಸಿಗಳಾಗಿದ್ದ ಕಿರಣ್ ಹಾಗೂ ಸವಿತಾ ಪರಸ್ಪರ ಪ್ರೀತಿಸಿ, ಐದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ. ಕೌಟುಂಬಿಕ ಕಲಹದಿಂದಾಗಿ ಕಿರಣ್ ಹಾಗೂ ಸವಿತಾ ಒಂದು ವರ್ಷದ ಹಿಂದೆ ಬೇರೆ ಬೇರೆಯಾಗಿದ್ದರು. ಬಳಿಕ ಸವಿತಾ ಮಗುವನ್ನು ಕರೆದುಕೊಂಡು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದಳು.
ಪತ್ನಿ ಹಾಗೂ ಮಗುವಿನ ಅಗಲಿಕೆಯಿಂದ ಕಿರಣ್ ಮಾನಸಿಕವಾಗಿ ಕುಗ್ಗಿದ್ದ. ಸವಿತಾ ಮಗುವನ್ನು ಕರೆದುಕೊಂಡು ಇಂದು ಬೆಳಗಾವಿಗೆ ವಾಸಪ್ ಬಂದಿದ್ದಳು. ಈ ಸುದ್ದಿ ತಿಳಿಯುತ್ತಿದ್ದಂತೆ ಕಿರಣ್ ಮಗನನ್ನು ನೋಡಲು ಪತ್ನಿಯ ತವರು ಮನೆಗೆ ಬಂದಿದ್ದ. ಈ ವೇಳೆ ಸವಿತಾ ಹಾಗೂ ಕಿರಣ್ ಮಧ್ಯೆ ಜಗಳ ಆರಂಭವಾಗಿದ್ದು, ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಸವಿತಾ ಹಾಗೂ ಆಕೆಯ ಪೋಷಕರು ಕಿರಣ್‍ನನ್ನು ಅಟ್ಟಾಡಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ, ಕೊಲೆಗೈದಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಕಿರಣ್ ಮೃತದೇಹವನ್ನು ಮರಣೋತ್ತ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಶಹಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.