ಬೆಳಗಾವಿ: ಜಿಲ್ಲೆಯಿಂದ ಕೆಶಿಪ್ ಕಚೇರಿಯನ್ನ ಹಾಸನಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ,ರಾಜ್ಯ ಹೆದ್ದಾರಿ ಯೋಜನೆಯನ್ನ ಬೆಳಗಾವಿಯಂದ ಸ್ಥಳಾಂತರ ಮಾಡಿರುವುದಕ್ಕೆ ಸೂಪರ್ ಸಿಎಂ ರೇವಣ್ಣ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದವರೆಗೂ 107 ಕಿ.ಮೀ ಅಂತರದ ರಸ್ತೆಯನ್ನ ವಿಶ್ವಬ್ಯಾಂಕ್ ಸಹಯೋಗದಲ್ಲಿ 317 ಕೋಟಿ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅಧೀನದ ಕೆಶಿಪ್ ವತಿಯಿಂದ ಕಾಮಗಾರಿಯನ್ನ ಕೈಗೆತ್ತಿಕೊಳ್ಳಲಾಗಿತ್ತು. 2014 ಡಿಸೆಂಬರ್ ನಲ್ಲಿ ಆರಂಭವಾದ ಕಾಮಗಾರಿ 2016 ಡಿಸೆಂಬರ್ ನಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ತಡೆಗೋಡೆ, ಬೀದಿ ದೀಪ ಅಳವಡಿಕೆ ಸೇರಿದಂತೆ ಸಾಕಷ್ಟು ಪ್ರಮಾಣದ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿದೆ. ಕಾಮಗಾರಿಗಳು ಇನ್ನೂ ನಡೆಯುತ್ತಿದ್ದರೂ ಕೆಶಿಪ್ ಕಚೇರಿಯನ್ನ ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಬೆಳಗಾವಿಯಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್)ಯ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ಜುಲೈ 27, 2018ರಂದು ಆದೇಶ ಹೊರಡಿಸಿತ್ತು. ಬೆಳಗಾವಿ ನಗರದಲ್ಲಿರುವ ಕೆಶಿಪ್ ವಿಭಾಗದ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪ ವಿಭಾಗೀಯ ಕಚೇರಿಯನ್ನು ಬೆಳಗಾವಿಯಿಂದ ಮಡಿಕೇರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿತ್ತು. ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿಯನ್ನು ಹೊಳೆನರಸೀಪುರಕ್ಕೆ ಶಿಫ್ಟ್ ಮಾಡಲು ಹಾಗೂ ಬಸವನಬಾಗೇವಾಡಿಯ ಕೆಶಿಪ್ ಉಪವಿಭಾಗ ಕಚೇರಿಯನ್ನು ಬೇಲೂರಿಗೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಅಲ್ಲದೆ ಶಿವಮೊಗ್ಗ ಲೋಕೋಪಯೋಗಿ ವಿಶೇಷ ಉಪ ವಿಭಾಗೀಯ ಕಚೇರಿಯನ್ನು ಅರಸೀಕೆರೆಗೆ ಶಿಫ್ಟ್ ಮಾಡಲು ಸೂಚಿಸಲಾಗಿತ್ತು.
Advertisement
Advertisement
ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಭಾವದಿಂದಲೇ ಹುದ್ದೆಗಳ ಸಮೇತವಾಗಿ ಈ ಎಲ್ಲಾ ಕಚೇರಿಗಳ ಸ್ಥಳಾಂತರಕ್ಕೆ ಆದೇಶ ಹೊರ ಬಿದ್ದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದು ಉತ್ತರ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews