– ತಂದೆ-ತಾಯಿ ನೆನೆದು ರಮೇಶ್ ಭಾವುಕ
ಬೆಳಗಾವಿ: ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ಇದೀಗ ಗೋಕಾಕ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು, ನಾನು ನಾಮಪತ್ರ ಕೊಟ್ಟು ಎಲ್ಲಿ ಕುಳಿತರೂ ಜನ ನನ್ನನ್ನು ಗೆಲ್ಲಿಸುತ್ತಾರೆ. ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ಕೊಟ್ಟ ದಿನವೇ ಚುನಾವಣೆಗೆ ಸ್ಪರ್ಧೆ ಮಾಡಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಕಾನೂನು ಅಡಚಣೆ, ತಾಂತ್ರಿಕ ಸಮಸ್ಯೆ ಬಗ್ಗೆ ವಕೀಲರೊಂದಿಗೆ ಚರ್ಚೆ ಮಾಡುತ್ತೇವೆ. ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ, ಸ್ಪೀಕರ್ ಅವರ ಆದೇಶ ಓದಿ ಹೇಳಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಸುಪ್ರೀಂಕೋರ್ಟಿನಲ್ಲಿ ಒಂದು ತಾಸು ನಿಲ್ಲುವುದಿಲ್ಲ. ರಮೇಶ್ ಕುಮಾರ್ ಕಾನೂನು ಬಾಹಿರವಾಗಿ ಆದೇಶ ನೀಡಿದ್ದಾರೆ. ನೂರಕ್ಕೆ ನೂರರಷ್ಟು ಸುಪ್ರೀಂಕೋರ್ಟಿನಲ್ಲಿ ನಮಗೆ ಜಯ ಸಿಗುತ್ತದೆ. ನಾವೇ ನಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂಬುದು ತೀರ್ಮಾನ ಮಾಡಿಲ್ಲ. ಆದರೆ ಎಲ್ಲ ಅನರ್ಹ ಶಾಸಕರು ಕೂಡ ನಿರ್ಧಾರ ಮಾಡಿದ್ದಾರೆ ಎಂದರು.
Advertisement
Advertisement
ನಾನು ನಾಮಪತ್ರ ಕೊಟ್ಟು ಎಲ್ಲಿ ಕುಳಿತರು ಕ್ಷೇತ್ರದ ಜನ ಗೆಲ್ಲಿಸುತ್ತಾರೆ. ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ. ಅವರು ಕೈಬಿಟ್ಟ ದಿನವೇ ನಾನು ಝೀರೋ, ಜನ ಇರೋವರೆಗೂ ಯಾರೂ ಏನೂ ಮಾಡಲು ಆಗಲ್ಲ. ಪ್ರವಾಹದ ಸಂದರ್ಭದಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಸತೀಶ್ ಗೋಕಾಕ್ ನಲ್ಲಿ ಟೋಪಿ ಹಾಕಿಕೊಂಡು ಫೋಟೋ ಹಾಕಿಸಿಕೊಂಡು ಪ್ರಚಾರ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ಅನರ್ಹ ಅನಿಸಿಲ್ಲ. ಜನರು ಮತ್ತು ಅಧಿಕಾರಿಗಳು ನನ್ನ ಅಷ್ಟು ಪ್ರೀತಿ ಮಾಡುತ್ತಾರೆ ಎಂದು ತಿಳಿಸಿದರು.
Advertisement
ವಸ್ತು ಕಳೆದುಕೊಂಡ ಕುರಿತು ಗೋಕಾಕ್ ಸಮಾವೇಶದಲ್ಲಿ ಬಹಿರಂಗ ಪಡಿಸುವ ಕುರಿತು ಸತೀಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತೀಶ್ ಎಲ್ಲಿ ಕಾರ್ಯಕ್ರಮ ಮಾಡುತ್ತಾರೆ ಅದೇ ವೇದಿಕೆ ಮೇಲೆ ನಾನು ಹೋಗಿ ಏನು ಎಂದು ಕೇಳುತ್ತೇನೆ. ಯಾವ ವಸ್ತು ಎಂದು ನನಗೆ ಗೊತ್ತಿಲ್ಲ. ಅವನೇ ಹೇಳಬೇಕು. ಸತೀಶ್ ಜಾರಕಿಹೊಳಿನೇ ಆ ವಸ್ತು ಹುಡುಕಿಕೊಡಲಿ. ಸತೀಶ್ ಹಗರಣ ಏನಿದ್ದಾವೆ ಎಂದು ನನಗೆ ಗೊತ್ತು. ನಾನು ಹೇಳಿದರೆ ನಮ್ಮ ಮನೆತನದ ಗೌರವ ಕಮ್ಮಿ ಆಗುತ್ತದೆ. ಈ ಕಾರಣಕ್ಕೆ ನಾನು ಬಾಯಿ ಮುಚ್ಚಿಕೊಂಡಿದ್ದೇನೆ. ನಮ್ಮ ತಂದೆ ಲಕ್ಷ್ಮಣ ಜಾರಕಿಹೊಳಿ ದೊಡ್ಡ ಪ್ರಮಾಣದಲ್ಲಿ ಹೋರಾಡಿ ಸಾಮ್ರಾಜ್ಯ ಕಟ್ಟಿದ್ದಾರೆ. ಸತೀಶ್ ಜಾರಕಿಹೊಳಿ ಸಾಮ್ರಾಜ್ಯ ಕಟ್ಟಿಲ್ಲ ಎಂದು ಟಾಂಗ್ ನೀಡಿದರು.
Advertisement
ಇದೇ ವೇಳೆ ನಮ್ಮ ತಂದೆ ಆದರ್ಶ ನಡಿಗೆಯಿಂದ ಈ ಮಟ್ಟಿಗೆ ನಾನು ಬಂದಿದ್ದೇನೆ. ನಮ್ಮ ತಂದೆ ಅಗರ್ಭ ಶ್ರೀಮಂತರಲ್ಲ ಕೂಲಿ ಮಾಡಿ ಈ ಮಟ್ಟಿಗೆ ಬಂದಿದ್ದೇವೆ ಎಂದು ತಂದೆ-ತಾಯಿ ನೆನೆದು ಭಾವುಕರಾದರು.
ಅಂಬಿರಾವ್ ಪಾಟೀಲ್ ವಿರುದ್ಧ ಸತೀಶ್ ಜಾರಕಿಹೊಳಿ ಆರೋಪ ವಿಚಾರದ ಕುರಿತು ಮಾತನಾಡಿದ ರಮೇಶ್, ಅಂಬಿರಾವ್ ಪಾಟೀಲ್ ಬಗ್ಗೆ ಸತೀಶ್ ಹತಾಶೆಯಿಂದ ಹೇಳುತ್ತಿದ್ದಾನೆ. ಅಂಬಿರಾವ್ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಗಳಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾರಾದರೂ ತಪ್ಪಾಗಿ ಹೇಳಿದರೆ ಇಂದೇ ಆತನ ತೆಗೆಯುತ್ತೇನೆ. ಇಂತಹ ಮಾತುಗಳಿಗೆ ಕ್ಷೇತ್ರದ ಜನರು ಕಿವಿಗೊಡದಂತೆ ರಮೇಶ್ ಮನವಿ ಮಾಡಿಕೊಂಡರು.
ಸತೀಶ್ ನಮ್ಮ ಕ್ಷೇತ್ರ ಸುತ್ತಿ ಮುಜುಗರವಾಗಿ ಮಾತನಾಡುತ್ತಿದ್ದಾರೆ. ಚುನಾವಣೆ ಬಂದಾಗ ನಾವು ಸಿದ್ಧರಾಗಿರೋಣ ಎಂದು ಸಹೋದರ ಲಖನ್ ಗೆ ಶುಭಹಾರೈಸಿದರು. ಲಖನ್ ಶಾಸಕ ಆದರೆ ಮೊದಲು ಸಂತೋಷ ನಾನು ಪಡುತ್ತೇನೆ. ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಗೋಕಾಕ್ ಕ್ಷೇತ್ರದ ಜನರಿಗೆ ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಗೊತ್ತು. ಜನರು ಸತೀಶ್ ಗೆ ಯಾವಾಗ ಬುದ್ಧಿ ಕಲಿಸಬೇಕೋ ಆವಾಗ ಕಲಿಸುತ್ತಾರೆ. ಸತೀಶ್ ವಿರೋಧ ಮಾಡಿದಷ್ಟು ನನಗೆ ಒಳ್ಳೆಯದಾಗುತ್ತದೆ. ಅತೀ ಶೀಘ್ರದಲ್ಲಿ ನನ್ನ ಮುಂದಿನ ನಡೆ ಬಗ್ಗೆ ತಿಳಿಸುತ್ತೇನೆ. ಮತದಾರರು ಯಾರೂ ಸಂಶಯ ಮತ್ತು ಡೈವರ್ಟ್ ಆಗೊದು ಬೇಡ. ಅಂಬಿರಾವ್ ಪಾಟೀಲ್ ಕಳೆದ ಮೂವತ್ತು ವರ್ಷಗಳಿಂದ ಗೋಕಾಕ್ ನಲ್ಲಿ ಬಂದುಳಿದಿದ್ದಾನೆ. ಯಾವುದೇ ಕೇಸ್ ಬಂದರೂ ಕೋರ್ಟ್ ಕಳುಹಿಸದೆ ಇಲ್ಲೇ ಮುಗಿಸಿ ಕಳುಹಿಸುತ್ತಾರೆ. ಬಡ ಜನರಿಗೆ ಈ ಮೂಲಕ ಅನುಕೂಲ ಮಾಡುತ್ತಿದ್ದಾನೆ. ಸತೀಶ್ ಕ್ಷೇತ್ರದಲ್ಲಿ ಪಿಎಗಳ ಹಾವಳಿ ಇದೆ ಎಂದು ಕಿಡಿಕಾರಿದರು.