ಬೆಳಗಾವಿ: ನೆರೆಯಲ್ಲಿ ಮನೆ ಕಳೆದುಕೊಂಡ ತಾಯಿಯೊಬ್ಬರಿಗೆ ಈಗ ಮಗನನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆಸ್ಪತ್ರೆಗೆ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ವೈದ್ಯರು ಚಿಕಿತ್ಸೆ ಸ್ಥಗಿತಗೊಳಿಸಿದ್ದು, ದುಡ್ಡಿಲ್ಲದೆ ತಾಯಿ ಕಣ್ಣೀರಿಡುತ್ತಿದ್ದಾರೆ.
ಜಿಲ್ಲೆಯ ಗೋಕಾಕ್ ನಗರದ ಗುರುವಾರ ಪೇಟೆ ನಿವಾಸಿ ಸುಜಾತಾ ಅವರು ತಮ್ಮ ಹದಿನೇಳು ತಿಂಗಳ ಮಗ ಸುಪ್ರಜ್‍ಗೆ ಚಿಕಿತ್ಸೆ ಕೊಡಿಸಲಾಗದೇ ಪರದಾಡುತ್ತಿದ್ದಾರೆ. ಕಳೆದ 1 ವಾರದಿಂದ ಮಗು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, 2 ದಿನಗಳ ಹಿಂದೆ ಮಗನನ್ನ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಅಲ್ಲಿ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಹಣ ಕಟ್ಟದ ಕಾರಣಕ್ಕೆ ಮಗುವಿಗೆ ಚಿಕಿತ್ಸೆ ಕೊಡುವುದನ್ನು ವೈದ್ಯರು ನಿಲ್ಲಿಸಿದ್ದಾರೆ. ಹಣ ಕಟ್ಟದಿದ್ದರೆ ಚಿಕಿತ್ಸೆ ನೀಡುವುದಿಲ್ಲ, ಸದ್ಯ ಆಗಿರುವ ಬಿಲ್ ಕಟ್ಟಿ ಮಗನನ್ನ ಕರೆದುಕೊಂಡು ಹೋಗುವಂತೆ ವೈದ್ಯರು ತಾಕೀತು ಮಾಡಿದ್ದಾರೆ. ಆದರೆ ನನ್ನ ಬಳಿ ಹಣವಿಲ್ಲ ಎಂದು ತಾಯಿ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ಪತಿಯನ್ನು ಕಳೆದುಕೊಂಡ ಸುಜಾತಾ ಅವರು, ಮೂರು ತಿಂಗಳ ಹಿಂದೆ ಘಟಪ್ರಭಾ ನದಿ ಪ್ರವಾಹಕ್ಕೆ ಇದ್ದ ಒಂದು ಮನೆಯನ್ನೂ ಕೂಡ ಕಳೆದುಕೊಂಡಿದ್ದಾರೆ. ಸದ್ಯ ತಗಡಿನ ಶೆಡ್‍ನಲ್ಲಿ ಸುಜಾತಾ ಹಾಗೂ ಅವರ ಮಗ ಜೀವನ ಸಾಗಿಸುತ್ತಿದ್ದಾರೆ. ಭೀಕರ ನೆರೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಇತರೆ ದಾಖಲೆಗಳು ಕೊಚ್ಚಿಹೋಗಿದೆ. ಹೀಗಾಗಿ ದಾಖಲೆ ನೀಡದೆ ಸರ್ಕಾರಿ ಸ್ಕಿಮ್ ಅನ್ವಯಿಸದ ಕಾರಣಕ್ಕೆ ಆಸ್ಪತ್ರೆ ಆಡಳಿತ ಮಂಡಳಿ, ಮೊದಲು ಹಣ ಕಟ್ಟಿ ಆಮೇಲೆ ಚಿಕಿತ್ಸೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇತ್ತ ಹಣವಿಲ್ಲದೆ, ಅತ್ತ ಮಗುವನ್ನು ಕಳೆದುಕೊಳ್ಳುವ ಭೀತಿಯಲ್ಲಿ ತಾಯಿ ಜೀವಿ ಪರದಾಡುತ್ತಿದೆ.
ಭೀಕರ ಪ್ರವಾಹ ಉಂಟು ಮಾಡಿದ ಅವಾಂತರ ಇನ್ನು ಸರಿಹೋಗಿಲ್ಲ. ಒಂದೆಡೆ ಮನೆಮಠ ಕಳೆದುಕೊಂಡು ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಬಂದ ನೆರೆಯಲ್ಲಿ ಅವರು ತಮ್ಮ ಜೀವವನ್ನ ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹೀಗಿರುವಾಗ ಪ್ರವಾಹದಲ್ಲಿ ಕೊಚ್ಚಿಹೋದ ದಾಖಲೆಗಳನ್ನು ಎಲ್ಲಿಂದ ತರುತ್ತಾರೆ ಎನ್ನುವ ಬಗ್ಗೆ ಆಸ್ಪತ್ರೆ ಆಡಳಿತ ಯೋಚಿಸಬೇಕು. ಮೊದಲೇ ನೊಂದು ಸುಣ್ಣವಾಗಿರುವ ಸಂತ್ರಸ್ತರ ಬಳಿ ಹಣ ಕೇಳಿದರೆ ಎಲ್ಲಿಂದ ತರುತ್ತಾರೆ ಎನ್ನುವುದನ್ನು ಯೋಚಿಸಬೇಕು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಸಂತ್ರಸ್ತ ಕುಟುಂಬಕ್ಕೆ ನೆರವಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.