ಧರ್ಮಸ್ಥಳ ಯೋಜನೆಯಡಿ ಅಭಿವೃದ್ಧಿಗೊಂಡ ಕೆರೆಗೆ ಬಾಗಿನ ಅರ್ಪಿಸಿದ ವೀರೇಂದ್ರ ಹೆಗ್ಗಡೆ

Public TV
3 Min Read
blg veeredra heggade

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮದ ಕೆರೆ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಕೆರೆ ಲೋಕಾರ್ಪಣೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಮತ್ತು ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರನ್ನು ಮತ್ತು ನಾಗರಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಲ್ಲಿ ಬರಗಾಲ ಬಂದ ಪ್ರದೇಶಗಳ ನಾಗರಿಕರು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದ್ದರು. ಕೆಲವೆಡೆ ಕತ್ತೆಗಳ ಮೆರವಣಿಗೆ ಮಾಡಿ ವರುಣನಕೃಪೆ ಬೇಡಿದ್ದರು. ಆದರೆ ಬೆಳೆಯುತ್ತಿರುವ ಜನಸಂಖ್ಯೆ ಅನುಗುಣವಾಗಿ ನೀರಿನ ಲಭ್ಯತೆಯ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ. ಜಲಮೂಲಗಳನ್ನು ಸಂರಕ್ಷಿಸದೇ ಕುಡಿಯುವ ನೀರಿಗಾಗಿ ಸರ್ಕಾರವನ್ನು ಜನರು ದೂರುತ್ತಾರೆ. ಈ ಸಮಸ್ಯೆ ಅರಿತ ಧರ್ಮಸ್ಥಳ ಯೋಜನೆ ರಾಜ್ಯಾದ್ಯಂತ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಸರ್ಕಾರ, ಸ್ಥಳೀಯರು ಮತ್ತು ಯೋಜನೆಯ ಸಹಭಾಗಿತ್ವದಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮದ ಮೂಲಕ ಜಲಮೂಲಗಳ ಸಂರಕ್ಷಣೆಯಿಂದ ಮಾತ್ರ ಜೀವಜಲ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ಮನುಕುಲಕ್ಕೆ ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಮಾಹಿತಿ ನೀಡಿದರು.

Veerendra Heggade

ಹಿಂದಿನ ದಿನಗಳಲ್ಲಿ ಮನೆ ಕೆಲಸಗಳಿಗೆ ಮಾತ್ರ ಸೀಮಿತರಾಗಿದ್ದ ಗೃಹಿಣಿಯರಿಗೆ ಪ್ರಪಂಚ ಜ್ಞಾನ, ವ್ಯವಹಾರ ಜ್ಞಾನ, ಸ್ವಾವಲಂಬನೆ, ಉಳಿತಾಯ ಮನೋಭಾವ ಮತ್ತಿತರ ಜೀವನ ಪರಿವರ್ತನೆ ತರುವ ಸಂಗತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಶೇಷ ಪ್ರಯತ್ನ ಕೈಗೊಂಡಿದೆ. ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರ ಸಬಲೀಕರಣದತ್ತ ಹೆಜ್ಜೆ ಹಾಕುವ ಪ್ರಯತ್ನ ನಡೆದಿದೆ ಎಂದರು.

ಸಮಾವೇಶದಲ್ಲಿ ಸುಜ್ಞಾನ ನಿಧಿ ಶಿಷ್ಯವೇತನ ವಿತರಿಸಿ ಮಾತನಾಡಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಧರ್ಮಸ್ಥಳ ಮಹಿಳಾ ಸ್ವ-ಸಹಾಯ ಸಂಘಗಳ ಮಾದರಿಯಲ್ಲಿ ತಾವೂ ಸಹ ಈ ಹಿಂದೆ ಅರಿಷಿನ-ಕುಂಕುಮ ಕಾರ್ಯಕ್ರಮ ಆಯೋಜಿಸುವ ಮೂಲಕ ತಾಲೂಕಿನ ಸಾವಿರಾರು ಮಹಿಳೆಯನ್ನು ಸಂಘಟಿಸಿ ಮಹಿಳಾ ಸಬಲೀಕರಣದತ್ತ ಪ್ರಯತ್ನ ನಡೆಸಿರುವುದಾಗಿ ಹೇಳಿದರು. ಬಳಿಕ ಅವರು ತಾಲೂಕಿನ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಯೋಜನೆಯ ವತಿಯಿಂದ ಮಂಜೂರಾದ ಅನುದಾನದ ಚೆಕ್ ವಿತರಿಸಿದರು.

mng veerendra hegde

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿಕ್ಕಮುನವಳ್ಳಿ ಆರೂಢಮಠದ ಶಿವಪುತ್ರ ಶ್ರೀಗಳು ಆಶೀರ್ವಚನ ನೀಡಿದರು. ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಬಿ ಹಿರೇಮಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಯೋಜನಾಧಿಕಾರಿಗಳಾದ ಪ್ರಭಾಕರ ನಾಯ್ಕ, ಮಂಜುನಾಥ ಹೆಗಡೆ, ಸುರೇಂದ್ರ ಆಚಾರ್ಯ, ಪ್ರಶಾಂತ ನಾಯ್ಕ, ಪುರುಷೋತ್ತಮ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಒಕ್ಕೂಟದ ಅಧ್ಯಕ್ಷೆ ಅನ್ನಪೂರ್ಣ ಬಾಗೇವಾಡಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ರಾಜು ರಪಾಟಿ, ಅಪ್ಪಯ್ಯ ಕೋಡೊಳಿ, ವ್ಯವಸ್ಥಾಪಕ ಬಸವರಾಜ ಕುರಹಟ್ಟಿ, ಜೀವನದಾಸ್ ಕುಮಾರ, ಪ್ರವೀಣ ದೊಡಮನಿ ಸೇರಿದಂತೆ ಯೋಜನೆಯ ಅಧಿಕಾರಿಗಳು, ಸಿಬ್ಬಂದಿ, ಸೇವಾ ಪ್ರತಿನಿಧಿಗಳು, ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳು, ಸದಸ್ಯರು, ಲಿಂಗನಮಠ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಶಸ್ತವನ ಪಠಿಸಿದರು. ಜಿಲ್ಲಾ ನಿರ್ದೇಶಕ ಶೀನಪ್ಪ ಮೂಲ್ಯ ಸ್ವಾಗತಿಸಿದರು. ಸಂತೋಷ ನಾಯ್ಕ ನಿರೂಪಿಸಿದರು. ರಿಯಾಜ್ ಅತ್ತಾರ ವಂದಿಸಿದರು. ಯೋಜನೆಯ ಸ್ವ-ಸಹಾಯ ಸಂಘಗಳ ಸಾಧನಾ ಸಮಾವೇಶಕ್ಕೆ ಚಾಲನೆ ನೀಡಬೇಕಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಬದಲಿಗೆ ತಮ್ಮ ಸಂದೇಶವನ್ನು ಆಪ್ತರ ಮೂಲಕ ಕಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಜೊತೆಗೆ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿದಂತೆ ಜಿ.ಪಂ. ಸದಸ್ಯೆ ಅಂಜನಾ ದೇಸಾಯಿ, ತಾ.ಪಂ. ಸದಸ್ಯೆ ಪೂಜಾ ಹರಿಜನ ಅವರೂ ಸಹ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

Share This Article
Leave a Comment

Leave a Reply

Your email address will not be published. Required fields are marked *