ಬೆಳಗಾವಿ: ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ನಾಯಿಗಳನ್ನ ಸಾಕುವುದು ಟ್ರೆಂಡ್ ಆಗಿ ಬಿಟ್ಟಿದೆ. ನಾಯಿಗೆ ಬೇಕಾದ ಆಹಾರದಿಂದ ಹಿಡಿದು ಬಟ್ಟೆ ಹಾಕುವವರೆಗೂ ಅದನ್ನ ಮನೆ ಸದಸ್ಯನಂತೆ ನೋಡಿಕೊಳ್ಳುತ್ತಾರೆ. ತಮಗೆ ತಿನ್ನಲು ಕಡಿಮೆಯಾದರೂ ಪರವಾಗಿಲ್ಲ, ಸಾಕು ನಾಯಿಗೆ ಏನನ್ನೂ ಕಡಿಮೆ ಮಾಡವುದಿಲ್ಲ. ಆದರೆ ಇಲ್ಲೊಂದು ಕುಟುಂಬ ನಾಯಿ ಜೊತೆಗಿನ ನಂಟನ್ನ ನೋಡಿ ಬಿಟ್ಟರೆ ನೀವು ಕೂಡ ಅಚ್ಚರಿ ಪಡುತ್ತೀರಿ.
Advertisement
ಬೆಳಗಾವಿ ನಗರದ ಕಾಳಿ ಅಮ್ರಾನ್ ಗಲ್ಲಿಯ ನಿವಾಸಿ ರತ್ನಾ ಹಿರೇಮಠ ಅವರು ಅದ್ಧೂರಿ ಹಾಗೂ ಸಂಭ್ರಮದಿಂದ ಸಾಕು ನಾಯಿಗೆ ಸೀಮಂತ ಮಾಡಿದ್ದಾರೆ. ತಮ್ಮ ಮನೆ ಮಗಳಂತಿರುವ ಈ ಸಾಕು ನಾಯಿಯ ಹೆಸರು ಬೇಬೋ ಎಂದು. ಸದ್ಯ ಗರ್ಭವತಿಯಾಗಿರುವ ಇದಕ್ಕೆ ಇನ್ನೊಂದು ವಾರದಲ್ಲಿ ಡೆಲಿವರಿ ಕೂಡ ಆಗಲಿದೆ. ಹೀಗಾಗಿ ತಮ್ಮ ಮನೆ ಮಗಳು ಗರ್ಭವತಿಯಾದರೆ ಹೇಗೆ ಕುಟುಂಬಸ್ಥರೆಲ್ಲರೂ ಸೇರಿಕೊಂಡು ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡುತ್ತಾರೋ ಅದೇ ರೀತಿ ಈ ಬೇಬೋವನ್ನ ಮಗಳೆಂದುಕೊಂಡಿರುವ ಕುಟುಂಬ ಇಂದು ಅಕ್ಕಪಕ್ಕದವರನ್ನೆಲ್ಲ ಕರೆದು ಮಗಳ ಸೀಮಂತ ಮಾಡುವ ಹಾಗೇ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ.
Advertisement
ಕಳೆದ ನಾಲ್ಕು ತಿಂಗಳ ಹಿಂದೆ ಪಕ್ಕದ ಮನೆಯವರು ಸಾಕುವಂತೆ ಈ ಬೇಬೋವನ್ನ ರತ್ನಾ ಅವರಿಗೆ ಕೊಟ್ಟು ಹೋಗಿದ್ದಾರೆ. ಇಬ್ಬರು ಗಂಡು ಮಕ್ಕಳು ಈ ರತ್ನಾ ಅವರಿಗಿದ್ದು ಈ ನಾಯಿ ಬಂದ ಮೇಲೆ ಮಗಳಂತೆ ಅದನ್ನ ನೋಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಇಂದು ಹತ್ತು ತೆರನಾದ ಬಗೆ ಬಗೆಯ ಸಿಹಿ ತಿನಸುಗಳು, ಹಣ್ಣುಗಳು, ಗೋವಿನ ಜೋಳ, ಟೊಮೆಟೋ, ಅರಿಶಿನ, ಕುಂಕುಮ, ಹಸಿರು ಬಳೆಗಳು, ಅಡಿಕೆ ಎಲೆ, ತಾಂಬೂಲ ಎಲ್ಲವನ್ನೂ ಇಡಲಾಗಿತ್ತು.
Advertisement
Advertisement
ಬೇಬೋಗೆ ಹಸಿರು ಬಣ್ಣದ ಸೀರೆಯನ್ನ ಉಡಿಸಿ ಕತ್ತಲ್ಲಿ ಹಾರ ಹಾಕಿ ಸಿಂಗರಿಸಲಾಗಿತ್ತು. ನೆಲದ ಮೇಲೆ ಅಕ್ಷತೆ ಕಾಳುಗಳನ್ನ ಹಾಕಿ ಅದರ ಸುತ್ತಲು ಬಲೂನ್ ಗಳನ್ನ ಕಟ್ಟಿ ಮಧ್ಯದಲ್ಲಿ ಬೇಬೋ ನಿಲ್ಲಿಸಿ ಮುತ್ತೈದೆಯರೆಲ್ಲರೂ ಆರತಿ ಮಾಡಿ ಹಾಡುಗಳನ್ನ ಹಾಡಿದರು. ಇದಾದ ಬಳಿಕ ಸೀಮಂತ ಕಾರ್ಯಕ್ಕೆ ಬಂದವರಿಗೆ ಹಬ್ಬದೂಟ ಬಡಿಸಿದರು ಎಂದು ಪಕ್ಕದ ಮನೆ ನಿವಾಸಿ ಸರೋಜಿನಿ ತಿಳಿಸಿದ್ದಾರೆ.
ಪ್ರಾಣಿಗಳನ್ನ ಹೀನಾಯವಾಗಿ ಕಾಣುವ ಅದೆಷ್ಟೋ ಜನರ ಮಧ್ಯೆ ಈ ಕುಟುಂಬ ಸಾಕುನಾಯಿಗೆ ಮಗಳ ಸ್ಥಾನ ಕೊಟ್ಟು ಅದ್ಧೂರಿಯಾಗಿ ಸೀಮಂತ ಮಾಡಿ ಪ್ರಾಣಿ ಮೇಲೆ ವಿಶೇಷ ಪ್ರೀತಿ ತೋರಿದ್ದಾರೆ.