ಚಿಕ್ಕೋಡಿ (ಬೆಳಗಾವಿ): ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಗ್ಗೆ ಪಬ್ಲಿಕ್ ಟಿವಿಗೆ ನೀಡಿದ್ದ ಹೇಳಿಕೆ ವಾಪಸ್ ಪಡೆಯುತ್ತೆನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಮೂಲಕ ಮಾಜಿ ಸಚಿವರು, ಡಿಸಿಎಂಗೆ ಹೆದರಿದ್ರಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬೆಂಬಲಿಗರ ಸಭೆಗೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟೆನ್ಷನ್‍ನಲ್ಲಿ ಏನನ್ನೋ ಮಾತನಾಡಿದೆ. ಪಬ್ಲಿಕ್ ಟಿವಿಗೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ. ಲಕ್ಷ್ಮಣ ಸವದಿ ಬಗ್ಗೆ ಬಾಯಿ ತಪ್ಪಿ ಏನನ್ನೋ ಹೇಳಿಬಿಟ್ಟೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಪ್ರಜೆಯ ಬಗ್ಗೆ ಮಾತನಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಆದರೆ ಉನ್ನತ ಹುದ್ದೆಯಲ್ಲಿ ಇರುವವರ ಬಗ್ಗೆ ಮಾತನಾಡುವುದು ಸರಿಯಲ್ಲ. ಬಾಯಿ ತಪ್ಪಿ ಮಾತನಾಡಿಬಿಟ್ಟೆ. ಅವನ ಮಾತಿನಿಂದಲೇ ಈ ಮಟ್ಟಕ್ಕೆ ಬಂದಿದ್ದಾನೆ. ಹೀಗಾಗಿ ನನ್ನ ಹೇಳಿಕೆ ವಾಪಸ್ ಪಡೆಯುತ್ತೇನೆ ಎಂದು ಪುನರುಚ್ಚರಿಸಿದರು.
ಈ ಹಿಂದೆ ಹೇಳಿದ್ದೇನು?:
ದರೂರು ಗ್ರಾಮದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ ಅಥಣಿಯ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿದ್ದು ದುರ್ದೈವ. ಲಕ್ಷ್ಮಣ ಸವದಿ ಮಾತನಾಡಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದು ವೇಳೆ ಮಾತನಾಡಿದ್ರೆ ಅದು ದುರ್ದೈವ. ಅಥಣಿ ಜನರು ತಿರಸ್ಕಾರ ಮಾಡಿದ್ದರೂ ಲಕ್ಷ್ಮಣ ಸವದಿ ಅವರಿಗೆ ಅಧಿಕಾರ ಸಿಕ್ಕಿದೆ. ರಾಜಕೀಯದಲ್ಲಿ ಯಾವಾಗ ಏನು ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ನಾವೆಲ್ಲ ಸರ್ಕಾರ ಬೀಳಬೇಕೆಂದು ರಾಜೀನಾಮೆ ನೀಡಿಲ್ಲ. ಅನ್ಯಾಯ ಆಗಿದ್ದರಿಂದ ರಾಜೀನಾಮೆ ನೀಡಿದ್ದು, ಬಿಜೆಪಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ನಾನೋರ್ವ ಸಾಮಾನ್ಯ ಕಾರ್ಯಕರ್ತನಾಗಿದ್ದು, ಮಹೇಶ್ ಕುಮಟಳ್ಳಿ ಅವರನ್ನು ಅಥಣಿ ಜನರು ಗೆಲ್ಲಿಸಬೇಕಿದೆ. ಕಳೆದ ಏಳೆಂಟು ತಿಂಗಳನಿಂದ ಸುಪ್ರೀಂಕೋರ್ಟ್ ವಿಷಯದಲ್ಲಿ ತೊಡಗಿಕೊಂಡಿದ್ದರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದರು.