ಬೆಳಗಾವಿ: ಜಿಲ್ಲೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಸೋಮವಾರ ನಡೆಯಿತು. ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಜುಭಾಯಿ ವಾಲಾ ಗೈರಾಗಿದ್ದರು. ಘಟಿಕೋತ್ಸವದಲ್ಲಿ ದಾವಣಗೆರೆ ವಿದ್ಯಾರ್ಥಿನಿ ಸುಚಿತ್ರಾ 9 ಚಿನ್ನದ ಪದಕ ಪಡೆದು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ನೂರಾರು ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಚಿನ್ನದ ಪದಕ ಪಡೆದು ತಮ್ಮ ಪೋಷಕರೊಂದಿಗೆ ಸಂತಸ ಹಂಚಿಕೊಂಡ್ರು. ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಾಜ್ಯಪಾಲ ವಜುಬಾಯ ವಾಲಾ ಬರಬೇಕಿತ್ತು. ಆದರೆ ಗೋವಾ ಸಿಎಂ ಮನೋಹರ ಪರಿಕ್ಕರ್ ನಿಧನ ಹಿನ್ನೆಲೆಯಲ್ಲಿ ಇಬ್ಬರು ಗೈರಾಗಿದ್ದರು.
ವಿವಿಯ ಘಟಿಕೋತ್ಸವದಲ್ಲಿ ಬ್ರಿಡ್ಜ್ ಮ್ಯಾನ್ ಎಂದು ಖ್ಯಾತರಾದ ಬಿ. ಗಿರಿಶ್ ಭಾರದ್ವಾಜ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. 64881 ಬಿಇ, 619 ಬಿ ಆರ್ಕ್, 4425 ಎಂ ಬಿ ಎ, 1801 ಎಂಸಿಎ, 2859 ಎಂಟೆಕ್, 26 ಎಂ ಆರ್ಕ್ ಹಾಗೂ 418 ಪಿಎಚ್ ಡಿ, 33 ಎಂಎಸ್ಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಚಿನ್ನದ ಪದಕ ಸ್ವೀಕರಿಸಿದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ರು.
ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಪದಕ ಹಿಡಿದುಕೊಂಡು ಸಂಭ್ರಮಿಸಿದ್ರು. ದಾವಣಗೆರೆಯ ಜೈನ್ ಎಂಜನಿಯರಿಂಗ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಸುಚಿತ್ರಾ 9 ಚಿನ್ನದ ಪದಕ ಪಡೆದು ಸಂಭ್ರಮಿಸಿದ್ರು. ಸುಚಿತ್ರಾ ಸದ್ಯ ಎಂ ಟೆಕ್ ಮಾಡುತ್ತಿದ್ದು, ಮುಂದೆ ಯುಪಿಎಸ್ ಸಿ ಮಾಡೋ ಉದ್ದೇಶವಿದೆ ಎಂದರು.
ಒಟ್ಟಾರೆಯಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನಿನ್ನೆ ಸಂಭ್ರಮ ಮನೆ ಮಾಡಿತ್ತು. ಇಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ದೇಶಕ್ಕೆ ಉತ್ತಮ ಎಂಜಿನಿಯರ್ ಆಗಿ ರೂಪಗೊಳ್ಳಲಿ ಎಂಬುದು ಪೋಷಕರ ಆಶಯವಾಗಿದೆ.