ಧರ್ಮದ ಹೆಸರಲ್ಲಿ ಯಾರನ್ನೂ ಹೊರ ಹಾಕುವ ಕಾನೂನಿಲ್ಲ: ಜೀರಲಿ

Public TV
2 Min Read
BLG 5

ಬೆಳಗಾವಿ: ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪ್ರಪಂಚದ ಅಗ್ರಸ್ಥಾನದ ದೇಶ ಭಾರತವಾಗಿದ್ದು, ಎಲ್ಲ ಜನಾಂಗಕ್ಕೆ ಶಾಂತಿಯದೋಟವಾಗಿದೆ. ಈ ದೇಶದ ಯಾವ ಪ್ರಜೆಯನ್ನೂ ಧರ್ಮದ ಆಧಾರದ ಮೇಲೆ ಹೊರ ಹಾಕುವ ಯಾವುದೇ ಕಾನೂನುಗಳು ಇಲ್ಲ ಎಂದು ಖ್ಯಾತ ನ್ಯಾಯವಾದಿ ಎಮ್.ಬಿ.ಜೀರಲಿ ಹೇಳಿದರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ ವತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆಯ ಅಗತ್ಯತೆ ಮತ್ತು ವಾಸ್ತವಿಕತೆಯ ಜಾಗೃತಿ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭಾರತ ದೇಶ ಅನೇಕ ಭಾಷೆ, ಸಾವಿರಾರು ಜಾತಿ, ಸಂಸ್ಕೃತಿಗಳ ಆಗರವಾಗಿದ್ದು ಅನೇಕತೆಯಲ್ಲಿ ಏಕತೆ ಹೊಂದಿದ ಜಗತ್ತಿನ ಏಕೈಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರತಿಯೊಂದು ಧರ್ಮ_ಜಾತಿಯ ವ್ಯಕ್ತಿಗೆ ಸಂವಿಧಾನ ಬದ್ಧ ಹಕ್ಕು ನೀಡಿದೆ. 1971ರಲ್ಲಿ ಬಾಂಗ್ಲಾ ನಿರಾಶ್ರಿತರಿಗೆ, ಚೀನಾ ದೇಶದಿಂದ ಹೊರದಬ್ಬಿಸಿಕೊಂಡ ಟಿಬೆಟಿಯನ್ನರಿಗೆ ನಿರಾಶ್ರಿತರಿಗೆ ಪೌರತ್ವ ನೀಡಿದೆ ಎಂದರು.

ಅಖಂಡ ಭಾರತದಿಂದ ಬೇರ್ಪಟ್ಟ ಇಸ್ಲಾಂ ದೇಶಗಳಾಗಿ ನಿರ್ಮಾಣವಾಗಿರುವ ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನ್ ದೇಶಗಳಲ್ಲಿ ಬಹುಸಂಖ್ಯಾತ ಮುಸ್ಲಿಮರಿಂದ ಧಾರ್ಮಿಕ ಹಿಂಸೆಗೆ ಒಳಗಾದ ಹಿಂದೂ, ಕ್ರೈಸ್ತ, ಪಾರ್ಸಿ, ಜೈನ, ಬೌದ್ಧ ಮತ್ತು ಸಿಖ್ ಸಮುದಾಯಕ್ಕೆ ಭಾರತದ ಪೌರತ್ವ ನೀಡಿದರೆ ಈ ದೇಶದ ಅಮಾಯಕ ಮುಸ್ಲಿಮರ ತಲೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಪ್ರತಿಭಟನೆಗೆ ದೂಡುತ್ತಿರುವುದು ಕಳವಳಕಾರಿ ಸಂಗತಿ. ಪೌರತ್ವ ಕಾಯ್ದೆ ಅನ್ನೋದು ಪೌರತ್ವ ನೀಡುವ ಕಾಯ್ದೆ. ದೇಶದ ಯಾವುದೇ ಪ್ರಜೆಗಳ ಪೌರತ್ವ ಕಸಿದುಕೊಳ್ಳುವ ಕಾಯ್ದೆಯಲ್ಲ ಎಂದರು.

ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್ ಉದ್ಘಾಟಿಸಿ ಮಾತನಾಡಿ, ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ರಾಷ್ಟ್ರದ ರಕ್ಷಣೆಗಾಗಿ ಮತ್ತು ದೇಶದ ಪ್ರತಿಯೊಬ್ಬ ನಾಗರಿಕನ ಶ್ರೇಯೋಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ. ಇದನ್ನು ಸಹಿಸದ ವ್ಯಕ್ತಿಗಳು ಪೌರತ್ವ ಕಾಯ್ದೆಯ ಬಗ್ಗೆ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ತೆಲೆಕೆಡಿಸಿಕೊಳ್ಳದೆ ಈ ದೇಶದ ಮುಸ್ಲಿಮರು ನಿರ್ಭಯವಾಗಿ ತಮ್ಮ ಜೀವನಸಾಗಿಸಬೇಕು ಎಂದು ತಿಳಿಸಿದರು.

ಎಪಿಎಂಸಿ ಸದಸ್ಯ ಎಫ್.ಎಸ್ ಸಿದ್ದನಗೌಡರ ಮಾತನಾಡಿ, ಈ ದೇಶದ ರಾಷ್ಟ್ರೀಯತೆಯನ್ನು ಗೌರವಿಸಿ ಭಾರತದಲ್ಲಿರುವ ಮುಸ್ಲಿಮರನ್ನು ಸುಳ್ಳು ಹೇಳಿಕೆಯ ಮೇಲೆ ಹೋರಾಟಕ್ಕೆ ಕರೆ ಕೊಡುವವರ ಬಗ್ಗೆ ಗಮನವಿರಲಿ. ಈ ದೇಶವನ್ನಾಳಿದ ಅಟಲ್ ಬಿಹಾರಿ ವಾಜಪೇಯಿ, ವಂದೇ ಮಾತರಂ ಗೀತೆಗೆ ಹೊಸ ರಾಗ ಸಂಯೋಜನೆ ಮಾಡಿದ ಎ.ಆರ್ ರೆಹಮಾನ್ ಅವರನ್ನ ಸತ್ಕರಿಸಿದ್ದು, ಮೋದಿ ಜೀ, ಎಪಿಜೆ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿಯನ್ನಾಗಿಸಿದ್ದು, ಕರ್ನಾಟಕದ ಕಬೀರ ಇಬ್ರಾಹಿಂ ಸುತಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಹಾಗೂ ಮುಸ್ಲಿಂ ಮಹಿಳೆಯರ ಸ್ವಾಭಿಮಾನ ಜೀವನಕ್ಕೆ ತ್ರಿವಳಿ ತಲಾಕ್ ರದ್ಧತೆ ಮುಸ್ಲಿಮರ ಹಿತಕ್ಕಾಗಿ ಕೈಕೊಂಡ ಕ್ರಮಗಳು. ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧದ ಸರ್ಕಾರವಲ್ಲ ಎಂದರು.

ಪ್ರಾಚಾರ್ಯ ಡಾ.ಸಿ.ಬಿ ಗಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಬಿ.ಬಿ.ಸಂಗನಗೌಡರ, ನ್ಯಾಯವಾದಿ ಚನಬಸ್ಸು ಇಟಿ ಇದ್ದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ.ಎಮ್.ಎಚ್.ಪೇಂಟೆದ ಸ್ವಾಗತಿಸಿದರು. ಶ್ರೀದೇವಿ ಪಡೆಣ್ಣವರ, ರಾಜೇಶ್ವರಿ ಗೌಡರ ನಿರೂಪಿಸಿದರು. ಏಕತಾ ಸುರ್ಯವಂವಶಿ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *