– ರಾತ್ರೋರಾತ್ರಿ ಕಾಂಗ್ರೆಸ್ ಅತೃಪ್ತ ಶಾಸಕ ದಿಢೀರ್ ಪ್ರತ್ಯಕ್ಷ
ಬೆಳಗಾವಿ (ಚಿಕ್ಕೋಡಿ): ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದ ಕಾಂಗ್ರೆಸ್ ಶಾಸಕರು ಒಬ್ಬೊಬ್ಬರಾಗಿ ಕ್ಷೇತ್ರಕ್ಕೆ ಮರಳುತ್ತಿದ್ದಾರೆ. ಈ ಬೆನ್ನಲ್ಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಕೂಡ ಗುರುವಾರ ರಾತ್ರಿ ಕ್ಷೇತ್ರದಲ್ಲಿ ದಿಢೀರ್ ಆಗಿ ಪ್ರತ್ಯಕ್ಷರಾಗಿದ್ದಾರೆ.
ಅಥಣಿ ಪಟ್ಟಣದ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದ್ದ ಕಾಮಗಾರಿಯನ್ನು ಶಾಸಕ ಮಹೇಶ ಕುಮಟಳ್ಳಿ ಅವರು ರಾತ್ರಿ 9 ಗಂಟೆ ಸುಮಾರು ವೀಕ್ಷಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎನ್ನುವುದು ಕೇವಲ ಉಹಾ ಪೋಹ. ನಾನು ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಸಿಎಲ್‍ಪಿ ಸಭೆಗೆ ಗೈರು ಆಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ನನಗೆ ಬ್ಯಾಕ್ ಪೇನ್ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ ಸಿಎಲ್‍ಪಿ ಸಭೆ ನಿಗಧಿಯಾಗುವ ಮುನ್ನವೇ ಮುಂಬೈಗೆ ಟಿಕೇಟ್ ಬುಕ್ ಮಾಡಿದ್ದೆ. ಚಿಕಿತ್ಸೆಗೆ ಪಡೆಯಲು ಹೋಗುವುದು ಅನಿವಾರ್ಯವಾಗಿದ್ದರಿಂದ ಪಕ್ಷದ ನಾಯಕರಿಗೆ ಪತ್ರ ಕೂಡ ಬರೆದಿದ್ದೇನೆ ಎಂದ ಅವರು, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಕಾಂಗ್ರೆಸ್‍ನಿಂದ. ಹೀಗಾಗಿ ಪಕ್ಷವನ್ನು ಬಿಟ್ಟು ಹೋಗುವ ವಿಚಾರವನ್ನು ಮಾಡಿಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv