ಚಿಕ್ಕೋಡಿ(ಬೆಳಗಾವಿ): ನಮ್ಮ ದೇಶದ ಯುವಕರು ಮದ್ಯಪಾನ, ಧೂಮಪಾನ ಹಾಗೂ ತಂಬಾಕು ಸೇವನೆಯ ದುಶ್ಚಟಕ್ಕೆ ಬಲಿಯಾಗಬಾರದು ಎನ್ನುವ ಉದ್ದೇಶದಿಂದ ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟು, ಯುವ ಸಮುದಾಯದಲ್ಲಿ ಆರೋಗ್ಯದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾವಿರಾರು ಕಿ.ಲೋ ಮೀಟರ್ ಸೈಕಲ್ ಸವಾರಿ ಹೊರಟಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ರಮೇಶ ಪೂಜೇರಿ. 52 ವಯಸ್ಸಿನ ರಮೇಶ ಪೂಜೇರಿ ಸಂಕೇಶ್ವರ ಪಟ್ಟಣದಿಂದ ಧರ್ಮಸ್ಥಳದವರೆಗೂ ಸೈಕಲ್ ಜಾಥಾ ಹೊರಟಿದ್ದಾರೆ. ಯುವ ಜನಾಂಗ ವ್ಯಸನ ಮುಕ್ತವಾಗಬೇಕು. ಸದೃಢ ಸಮಾಜ ನಿರ್ಮಾಣವಾಗಬೇಕು ಎಂದು ರಮೇಶ್ ಪೂಜೇರಿ ಈ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ.
Advertisement
ಈ ಮೊದಲು ಹಲವಾರು ಸಮಾಜಮುಖಿ ಚಟುವಟಿಕೆಗಳಿಗಾಗಿ ಸೈಕಲ್ ನಲ್ಲಿ ಜಾಗೃತಿ ಜಾಥಾ ಮಾಡುವ ಮೂಲಕ ಜನರ ಗಮನ ಸೆಳೆದಿದ್ದರು. ರಮೇಶ್ ಪೂಜೇರಿಯ ಈ ವ್ಯಸನ ಮುಕ್ತ ಸಮಾಜದ ಜಾಗೃತಿ ಸೈಕಲ್ ಜಾಥಾ ಆರಂಭಿಸುವ ಮುನ್ನ ಸಂಕೇಶ್ವರ ನಾಗರಿಕರ ವೇದಿಕೆ ಹಾಗೂ ಹಿರಿಯರು ರಮೇಶ್ ಅವರಿಗೆ ಸತ್ಕರಿಸಿ ಜಾಥಾ ಯಶಸ್ವಿಗೆ ಶುಭ ಕೋರಿದ್ದಾರೆ. ಸದೃಢ ಆರೋಗ್ಯಯುತ ಸಮಾಜಕ್ಕೆ ರಮೇಶ್ ಪೂಜೇರಿ ಸೈಕಲ್ ಜಾಥಾ ಅಭಿಯಾನ ನಿಜಕ್ಕೂ ಶ್ಲಾಘನೀಯವಾಗಿದೆ.
Advertisement
ಜಾಥಾಗೆ ಚಾಲನೆ ನೀಡುವ ಸಂದರ್ಭದಲ್ಲಿ ಸಂಕೇಶ್ವರ ಪಟ್ಟಣದ ಮುಖಂಡರಾದ ನಾಗಪ್ಪ ಅಣ್ಣಾ ಕರಜಗಿ, ಕುಮಾರ ಗುಡಶಿ, ಶಂಕರ ಪಟೇದ ಹಾಗೂ ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್‍ಐ ಗಣಪತಿ ಕೂಗನೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Advertisement