– ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಡೋಂಟ್ ಕೇರ್
– ಸಾರ್ವಜನಿಕರಿಂದ ಆಕ್ರೋಶ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ರೈಲು ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿ ನಾಲ್ಕೈದು ವರ್ಷಗಳೇ ಕಳೆದಿದೆ. ಇನ್ನೂ ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಜನ ಪರದಾಡುತ್ತಿದ್ದಾರೆ.
ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಸಂಸದರಾಗಿದ್ದಾಗ ಮೇಲ್ಸೇತುವೆ ಕೆಲಸಕ್ಕೆ ಅಡಿಗಲ್ಲು ಹಾಕಿದ್ದರು. ನಾಲ್ಕೈದು ವರ್ಷಗಳ ಹಿಂದೆ ಪ್ರಾರಂಭವಾದ ಈ ಸೇತುವೆ ಕಾಮಗಾರಿಯು ಇನ್ನೂ ಪೂರ್ಣವಾಗದೆ ಈ ಧೂಳು, ಕಚ್ಚಾ ರಸ್ತೆಯಲ್ಲಿಯೇ ಜನರು ವಾಹನ ಸಂಚಾರಿಸುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ಇಲ್ಲಿ ಅಪಘಾತಗಳಾಗಿದ್ದು, ಇಲ್ಲಿನ ಜನರು ಈ ಮಾರ್ಗ ಬಿಟ್ಟರೆ ಬೇರೆ ಮಾರ್ಗವಿಲ್ಲದೆ ಇದೇ ದಾರಿಯಲ್ಲಿ ಸಂಚರಿಸುವ ಪರಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಸ್ಥಳೀಯರು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹಿತ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಮೇಲ್ಸೇತುವೆಯು ಎಚ್ ಆಕಾರದಲ್ಲಿ ನಿರ್ಮಾಣವಾಗಬೇಕಿತ್ತು. ಬ್ಲೂ ಪ್ರಿಂಟ್ ಪ್ರಕಾರ ಕೆಲಸ ಮಾಡದೆ ಅರ್ಧಕ್ಕೆ ನಿಲ್ಲಿಸಿದ್ದಾರೆ. ಐದಾರು ಗ್ರಾಮಗಳಿಗೆ ಸಂಪರ್ಕಿಸುವ ಈ ರಸ್ತೆ ದಿನಂಪ್ರತಿ ಸಾವಿರಾರು ವಾಹನಗಳು ಈ ಚಿಕ್ಕ ರಸ್ತೆ ಮೂಲಕ ಸಂಚರಿಸುತ್ತಿವೆ. ರಾತ್ರಿ ವೇಳೆ ಯಾವುದಾದರೂ ಅವಘಡ ಸಂಭವಿಸಿದರೆ ಆಸ್ಪತ್ರೆಗೆ ಹೋಗಲು ಕೂಡ ಅಸಾಧ್ಯವಾಗುತ್ತಿದೆ.
ಎಚ್ ಆಕಾರದಲ್ಲಿ ಮೂರು ಕಡೆ ನಿರ್ಮಾಣವಾಗಬೇಕಿದ್ದ ಈ ಸೇತುವೆ ಸದ್ಯ ಒಂದು ಕಡೆ ಮಾತ್ರ ನಿರ್ಮಾಣವಾಗಿಲ್ಲ. ಇಲ್ಲಿ ಕೆಲ ಕುತಂತ್ರಗಳು ನಡೆದಿರುವಂತೆ ಕಾಣುತ್ತಿದ್ದು, ಕೇವಲ ಮೂರ್ನಾಲ್ಕು ಜನರ ಒಳಿತಿಗಾಗಿ ಈ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಖಾಸಗಿ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಖಾಸಗಿ ರಸ್ತೆ ಬಂದ್ ಮಾಡಿದರೆ ರಾಯಬಾಗದಿಂದ ಮೊರಬ, ಬೆಕ್ಕೆರಿ ಹೀಗಿ ನಾಲ್ಕೈದು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದಂತಾಗುತ್ತದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ರಾಯಬಾಗ ರೈಲು ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಆದಷ್ಟು ಬೇಗನೆ ಸೇತುವೆ ಕಾರ್ಯ ಪ್ರಾರಂಭಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.