ಬೆಳಗಾವಿ: ಬಿಜೆಪಿ ಸೇರುವ ಹಿಂದಿನ ದಿನ ರಾತ್ರಿ ನನಗೆ ಒಂದು ನಿಮಿಷವೂ ನಿದ್ದೆ ಬಂದಿಲ್ಲ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರ ಕಟ್ಟಾ ಅಭಿಮಾನಿ. ನನ್ನ ದುಖಃವನ್ನು ನಾನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದುಖಃವನ್ನು ನುಂಗಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾನು ಕಾಂಗ್ರೆಸ್ಸಿನಲ್ಲಿ ಉಳಿದಿದ್ದರೇ ನನನ್ನು ನಿರ್ನಾಮ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಪಕ್ಷದ ಜೊತೆಗೆ ನಂಟು ನೆನಪಿಸಿಕೊಂಡು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಭಾವುಕರಾದರು.
ಗೋಕಾಕ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಬ್ಯಾಗ್ ಹಿಡಿದು ಬಾಗಿಲು ಕಾಯೋವರು ಮಾತ್ರ ಲೀಡರ್ ಆಗಿರುತ್ತಾರೆ. ಪಕ್ಷದಲ್ಲಿ ಮಾಸ್‍ಲೀಡರ್ ಗಳಿಗೆ ಯಾವುದೇ ಬೆಲೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಪಕ್ಷದಲ್ಲಿ ಏನಾದರೂ ಮಲ್ಲಿಕಾರ್ಜುನ ಖರ್ಗೆ ನೋಡಲ್ಲ. ಸಿದ್ದರಾಮಯ್ಯ ದರ್ಪ, ಡಿಕೆಶಿ ಪೋಸ್ ಕೊಡೋಕೆ ಮಾತ್ರ ನಾಯಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ಬ್ಲ್ಯಾಕ್ ಮೇಲ್ ಮಾಡಲ್ಲ ಧೈರ್ಯನೂ ಮಾಡಲ್ಲ. ಸಿದ್ದರಾಮಯ್ಯ ಎರಡನ್ನೂ ಮಾಡಿ ಕಾಂಗ್ರೆಸ್ಸಿನಲ್ಲಿ ಸಿಎಂ ಆದರು. ನಿಷ್ಠಾವಂತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಅನೇಕ ವರ್ಷಗಳಿಂದ ಸತೀಶ್ ಜಾರಕಿಹೊಳಿ ನನ್ನನ್ನು ವಿರೋಧಿಸುತ್ತಾರೆ. ಲಖನ್ ಜಾರಕಿಹೊಳಿ ನನ್ನ ಜೊತೆಗೆ ಇದ್ದು ಮೋಸ ಮಾಡಿದ್ದು ದುಖಃವಾಗಿದೆ. ಇದನ್ನು ನನೆದು ಜೀವನದಲ್ಲಿ ಜಿಗುಪ್ಸೆ ಬರೋ ಹಾಗೇ ಆಗಿದೆ. ನಮ್ಮ 5 ಜನರ ಸಹೋದರಲ್ಲಿ ಲಖನ್ ಇಷ್ಟು ದಿನ ಆಟವಾಡಿದ್ದನು. ಸಹೋದರರನ್ನು ಬೇರೆ ಮಾಡಿ ಅವನು ಲಾಭ ಮಾಡಿಕೊಂಡಿದ್ದಾನೆ ಎಂದು ಸಹೋದರನ ವಿರುದ್ಧ ಕಿಡಿಕಾರಿದರು.
ನಾನು ಸತೀಶ್ ಜಾರಕಿಹೊಳಿ ಸಿಎಂ ಮಾಡುತ್ತೇನೆ ಎಂದು ಹೇಳಿದ್ದೆ. ಸತೀಶ್ ಸಿಎಂ ಆಗ್ತಾನೆ ಅಂತ ಲಖನ್ ಜಾರಕಿಹೊಳಿಗೆ ಸಹಿಸಲು ಆಗಲಿಲ್ಲ ಆತನಿಗೆ ಸಿಟ್ಟು ಬಂತು. ಈ ಬಗ್ಗೆ ನನ್ನ ಜತೆಗೆ ಒಮ್ಮೆ ಲಖನ್ ಜಾರಕಿಹೊಳಿ ಜಗಳ ಆಡಿದ್ದನು. ಲಖನ್, ಸತೀಶ್ ಜೊತೆಗೆ ಜಗಳ ಆಡಬೇಕು. ಆದರೆ ರಮೇಶ್ ಮಾತ್ರ ಸತೀಶ್ ನ ಸಿಎಂ ಮಾಡಲು ಹೊರಟ್ಟಿದ್ದಾರೆ ಎಂದು ಲಖನ್ ಅನೇಕರ ಮುಂದೆ ಹೇಳಿಕೊಂಡಿದ್ದಾನೆ. ನಾನು ಮುಖ್ಯಮಂತ್ರಿ ಆಗೋ ಆಸೆ ಹೊಂದಿಲ್ಲ. ನನ್ನ ಲೆವಲ್ ಗಿಂತ ನೂರು ಪಟ್ಟು ಬೆಳೆದಿದ್ದೇನೆ. ನನಗೆ ಯಾವುದೇ ಆಕಾಂಕ್ಷೆ ಇಲ್ಲ ಎಂದು ತಿಳಿಸಿದರು.