ಚಿಕ್ಕೋಡಿ (ಬೆಳಗಾವಿ): ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ನಡೆಸುತ್ತಿರುವ ತಂತ್ರಗಾರಿಕೆ ಪ್ರಯೋಜನವಾಗುವುದಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಬರ ನಿರ್ವಹಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಶಾಸಕರು, ಮೇ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಪಕ್ಷಕ್ಕೆ ಸೇರಲಿರುವ ಶಾಸಕರ ವಿಶ್ವಾಸ ಪಡೆದು ಸರ್ಕಾರ ರಚನೆಗೆ ಮುಂದಾಗಲಿದ್ದೇವೆ ಎಂದು ಆಪರೇಷನ್ ಕಮಲದ ಗುಟ್ಟು ಬಿಚ್ಚಿಟ್ಟರು.
Advertisement
Advertisement
ರಾಜ್ಯದಲ್ಲಿ ಆವರಿಸಿರುವ ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆ ಮಾಡಬೇಕಿದ್ದ ರಾಜ್ಯದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ವಿದೇಶದಲ್ಲಿ ಮೋಜು ಮಸ್ತಿ ಮಾಡಿ ಬಂದಿದ್ದಾರೆ. ಬರಗಾಲ ಸಂದರ್ಭದಲ್ಲಿ ಕೃಷ್ಣಾ ನದಿಗೆ ನೀರು ತರಿಸುವಲ್ಲಿ ಬೇಜವಾಬ್ದಾರಿ ತೋರಿದ ಡಿ.ಕೆ.ಶಿವಕುಮಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
Advertisement
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರಂತೆ ಲೋಕಸಭಾ ಚುನಾವಣೆಯ ಜನಾದೇಶವನ್ನು ಅರಿತು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಮೂಲಕ ಸರ್ಕಾರ ನಡೆಸಲು ಬಿಜೆಪಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.