-ಒಂದು ಜಿಲ್ಲೆ, ಮೂರು ಪವರ್ ಸೆಂಟರ್
ಬೆಂಗಳೂರು: ಅಬ್ಬಾ ಖಾತೆ ಕಸರತ್ತು ಮುಗಿತು. ಇನ್ನು ಮೇಲಾದರೂ ಆಡಳಿತ ನಡೆಸುವತ್ತ ಗಮನ ಕೊಡಬಹುದು ಅಂತ ಸಿಎಂ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಶುರುವಾಗಿದೆ ಬೆಳಗಾವಿ ಟೆನ್ಷನ್. ಹೌದು ಸಿಎಂಗೆ ಸದ್ಯಕ್ಕೆ ಮುಗಿಯಲ್ಲ ಬೆಳಗಾವಿ ಟೆನ್ಷನ್ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಖಾತೆ ಹಂಚಿಕೆ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಪ್ರಶ್ನೆ ಸಿಎಂಗೆ ಕಾಡತೊಡಗಿದೆ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬೆಳಗಾವಿಗೆ ಜಿಲ್ಲಾ ಉಸ್ತುವಾರಿ ನೇಮಕ ಮಾಡೋದು ಬೇರೆ ಜಿಲ್ಲೆಗಳಷ್ಟು ಸುಲಭವವಲ್ಲ.
Advertisement
ಈ ಮಧ್ಯೆ ಜಿಲ್ಲಾ ಉಸ್ತುವಾರಿಯಾಗಲು ಬೆಳಗಾವಿ ದಿಗ್ಗಜರಲ್ಲಿ ಜಟಾಪಟಿ ಶುರುವಾಗಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಬಿದ್ದಿದೆ ಆ ಮೂವರು ದಿಗ್ಗಜರ ಕಣ್ಣು. ಬೆಳಗಾವಿ ಉಸ್ತುವಾರಿಯಾಗಲು ಮೂವರು ಘಟಾನುಘಟಿಗಳ ಮಧ್ಯೆ ಭಾರೀ ಫೈಟ್ ನಡೆಯುತ್ತಿದೆ. ಒಂದು ಜಿಲ್ಲೆ – ಮೂರು ಪವರ್ ಸೆಂಟರ್. ಇದು ಬೆಳಗಾವಿಯ ಸದ್ಯದ ಪರಿಸ್ಥಿತಿ.
Advertisement
ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಒಬ್ಬ ಪ್ರಭಾವಿ ಪವರ್ ಸೆಂಟರ್. ಹೈಕಮಾಂಡ್ ಆಶೀರ್ವಾದದಿಂದ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಬೆಳಗಾವಿಯ ಮತ್ತೊಂದು ಪವರ್ ಸೆಂಟರ್. ಹೈಕಮಾಂಡ್ ನಿಂದ ಉಮೇಶ್ ಕತ್ತಿಯವರಿಗೆ ಸದ್ಯದಲ್ಲೇ ಮಂತ್ರಿ ಮಾಡುವ ಭರವಸೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಸಚಿವರಾಗುವ ಮುನ್ನವೇ ಉಮೇಶ್ ಕತ್ತಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಆಗಲು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇವರಿಬ್ಬರಲ್ಲದೇ ಸಚಿವರಾಗುವ ಮೂಲಕ ಇದೀಗ ಬೆಳಗಾವಿ ಬಿಜೆಪಿ ರಾಜಕಾರಣಕ್ಕೆ ರಮೇಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದಾರೆ.
Advertisement
Advertisement
ಡಿಸಿಎಂ ಹುದ್ದೆ ವಂಚಿತ ರಮೇಶ್ ಜಾರಕಿಹೊಳಿಯವರಿಗೆ ಕೇಳಿದ ಜಲಸಂಪನ್ಮೂಲ ಖಾತೆ ಸಿಕ್ಕಿರಬಹುದು. ಆದರೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಆಗಲೂ ರಮೆಶ್ ಜಾರಕಿಹೊಳಿ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂರು ಪವರ್ ಸೆಂಟರ್ ಗಳ ಮಧ್ಯೆ ಓಲಾಡ್ತಿದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಹುದ್ದೆ.
ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಮತ್ತು ರಮೇಶ್ ಜಾರಕಿಹೊಳಿ ಪೈಕಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಆಗೋರು ಯಾರು? ಈ ಪ್ರಶ್ನೆಗೆ ಉತ್ತರ ಸಿಗ್ತಿಲ್ಲ. ಆದರೆ ಒಂದಂತೂ ಸ್ಪಷ್ಟ ಒಂದೊಮ್ಮೆ ಜಿಲ್ಲಾ ಉಸ್ತುವಾರಿಯಾಗುವ ವಿಚಾರದಲ್ಲಿ ಈ ಮೂವರ ಮಧ್ಯೆ ಸಂಘರ್ಷ ತೀವ್ರಗೊಂಡರೆ ಹಾಲಿ ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಜಗದೀಶ್ ಶೆಟ್ಟರ್ ಅವರೇ ಉಸ್ತುವಾರಿ ಆಗಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರಿಗೆ ಸಿಗುತ್ತೆ ಅನ್ನೋ ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಲೆಕ್ಕಾಚಾರ ಏನಿದೆ ಅನ್ನೋದೂ ಅಷ್ಟೇ ಕುತೂಹಲವಾಗಿದೆ. ಸಿಎಂ ಬಿಎಸ್‍ವೈ ಅವರ ನಡೆ ಮತ್ತು ಲೆಕ್ಕಾಚಾರ ಭಾರೀ ಸಸ್ಪೆನ್ಸ್ ಹುಟ್ಟಿಸಿದೆ.