ಬೆಂಗಳೂರು: ಭವಾರಿಯಾ ಗ್ಯಾಂಗ್ ಆಯ್ತು, ಚೆಡ್ಡಿ ಗ್ಯಾಂಗ್ ಆಯ್ತು, ಬನಿಯನ್ ಗ್ಯಾಂಗೂ ಆಯ್ತು. ಇದ್ಯಾವುದಪ್ಪ ಇದು ಬೆಡ್ ಶೀಟ್ ಗ್ಯಾಂಗು ಅಂತ ಹುಬ್ಬೇರಿಸ್ತಿದ್ದೀರಾ..? ಯೆಸ್. ಇಂಥದ್ದೂ ಗ್ಯಾಂಗ್ ಸಿಲಿಕಾನ್ ಸಿಟಿಯಲ್ಲಿ ಸದ್ಯ ಆಕ್ಟೀವ್ ಆಗಿದೆ. ಬೆಡ್‍ಶೀಟ್ ಅಡ್ಡ ಹಿಡಿದು ನಿಲ್ಲೋ ಮೂರ್ನಾಲ್ಕು ಖದೀಮರು ರಸ್ತೆ ಬದಿ ಇರುವ ಅಂಗಡಿ ಮುಂಗಟ್ಟುಗಳ ರೋಲಿಂಗ್ ಶೆಟರ್ ಹಾರೆಯಿಂದ ಮೀಟಿ ಒಳಗೆ ನುಗುತ್ತಾರೆ. ಬಳಿಕ ಇರೋ ಬರೋದನ್ನೆಲ್ಲಾ ಕದ್ದು ಎಸ್ಕೇಪಾಗ್ತಾರೆ. ಒಂದೇ ತಿಂಗಳಲ್ಲಿ ಅದರಲ್ಲೂ ಒಂದೇ ಏರಿಯಾದಲ್ಲಿ ಮೂರು ಕಡೆ ತಮ್ಮ ಕೈ ಚಳಕ ತೋರಿಸಿ ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿ ಪರಾರಿಯಾಗುತ್ತಿದ್ದಾರೆ.
ಫೆಬ್ರವರಿ 13ರಂದು ಬೆಂಗಳೂರಿನ ಉತ್ತರಹಳ್ಳಿಯ ಬಟ್ಟೆ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದರು. ಖದೀಮರು 45 ಸಾವಿರ ನಗದು ಹಾಗೂ 25 ಸಾವಿರದಷ್ಟು ಮೌಲ್ಯದ ಹೊಸ ಬಟ್ಟೆಗಳನ್ನ ಹೊತ್ತು ಪರಾರಿಯಾಗಿದ್ದರು. ಪುಟ್ಟೇನಹಳ್ಳಿಯ ವಾಚ್ ಶೋ ರೂಂ ಅಂಗಡಿ ಬೀಗ ಒಡೆದು ದುಬಾರಿ ವಾಚ್‍ಗಳನ್ನ ಎಗರಿಸಿ ಪರಾರಿಯಾಗಿತ್ತು. ಮೂರನೇ ಬಾರಿಗೂ ಪುಟ್ಟೇನಹಳ್ಳಿಯ ಮೊಬೈಲ್ ಅಂಗಡಿಯಲ್ಲಿ ಇದೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಡಿಸಿಪಿ ಅಣ್ಣಾಮಲೈ ವ್ಯಾಪ್ತಿಯಲ್ಲೇ ಈ ಘಟನೆ ನಡೆದಿದ್ದು, ಒಂದು ತಿಂಗಳಲ್ಲಿ ಒಟ್ಟು 3 ಕಡೆ ಕಳ್ಳತನ ನಡೆದಿದೆ. 7 ಜನ ಖದೀಮರಿರೋ ಈ ತಂಡ ಉತ್ತರ ಭಾರತದ ಕಡೆಯವರು ಅನ್ನೋ ಹಾಗಿದೆ. ಸದ್ಯ ಸುಬ್ರಹ್ಮಣ್ಯಪುರ ಮತ್ತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗಳಲ್ಲಿ 3 ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv