ಅಸ್ತಾನಾ: ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಸೌಂದರ್ಯದಿಂದ ಎಲ್ಲರ ಮನಸೆಳೆದಿದ್ದ ಗ್ಲಾಮರಸ್ ಸ್ಪರ್ಧಿ ಅಂತಿಮ ಹಂತ ತಲುಪಿದ ನಂತರ ತಾನು ಪುರುಷನೆಂದು ಬಹಿರಂಗಪಡಿಸಿದ ಅಚ್ಚರಿಯ ಘಟನೆ ಕಝಾಕಿಸ್ತಾನದಲ್ಲಿ ನಡೆದಿದೆ.
Advertisement
Advertisement
ಇಲೆ ದ್ಯಾಗಿಲೇವ್(22) ಅರಿನಾ ಅಲೀವಾ ಎಂಬ ಹೆಸರಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಆಯೋಜಕರಿಗೆ ಮಂಕುಬೂದಿ ಎರಚಿದ್ದಾನೆ. ಸುಮಾರು 4 ಸಾವಿರ ಸ್ಪರ್ಧಿಗಳನ್ನ ಹಿಂದಿಕ್ಕಿ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದ ಈತ ಕೊನೆಗೆ ತಾನು ಮಹಿಳೆಯಲ್ಲ ಪುರುಷ ಎಂದು ಹೇಳಿದಾಗ ಜಡ್ಜ್ ಗಳೇ ದಂಗಾಗಿದ್ದಾರೆ.
Advertisement
Advertisement
ನಾನು ಹಾಗೂ ನನ್ನ ಗೆಳೆಯರು ಸೌಂದರ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ನಂತರ ನಾನು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದೆ. ನಾನು ಯವಾಗ್ಲೂ ನೈಜ ಸೌಂದರ್ಯದ ಚಾಂಪಿಯನ್ ಆಗಿದ್ದೆ. ಅದೇ ಮೇಕಪ್, ಅದೇ ಸ್ಟೈಲ್‍ನಿಂದ ಹಲವಾರು ಯುವತಿಯರು ಒಂದೇ ಥರ ಕಾಣೊದನ್ನ ನೀವು ನೋಡಬಹುದು. ಹಾಗೂ ಟ್ರೆಂಡ್‍ಗಳನ್ನ ಪಾಲಿಸಿದ್ರೆ ನಾವು ಸುಂದರವಾಗಿದ್ದೀವಿ ಎಂದುಕೊಂಡಿರ್ತಾರೆ. ಆದ್ರೆ ನನಗೆ ಹಾಗೆ ಅನ್ನಿಸುವುದಿಲ್ಲ ಎಂದು ಪುರುಷ ಮಾಡೆಲ್ ಇಲೆ ಹೇಳಿದ್ದಾನೆ.
ಮಿಸ್ ವರ್ಚುವಲ್ ಕಝಾಕಿಸ್ತಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಲೆಗೆ ಸೆಮಿ ಫೈನಲ್ಸ್ ನಲ್ಲಿ ಆನ್‍ಲೈನ್ ಮೂಲಕ ಸಾಕಷ್ಟು ಜನ ಓಟ್ ಮಾಡಿದ್ದರು. ಆದ್ರೆ ಕೊನೆಯ ಹಂತದಲ್ಲಿ ಆಯೋಜಕರಿಗೆ ತಾನು ಸುಳ್ಳು ಹೇಳಿದ್ದ ಬಗ್ಗೆ ಬಹಿರಂಗಪಡಿಸಲು ಇಲೆ ನಿರ್ಧರಿಸಿದ್ದ.
ನಾನು ಫಿನಾಲೆ ತಲುಪಿದೆ. ಆದ್ರೆ ನಾನು ತೀರಾ ಮುಂದೆ ಹೋಗಿದ್ದೇನೆ ಎಂದು ಅರಿವಾಗಿ ಅರಿನಾ ಅಲೀವಿಯಾಳ ನಿಜವಾದ ಗುರುತು ಬಹಿರಂಗಪಡಿಸಲು ನಿರ್ಧರಿಸಿದೆ. ಮೊದಲಿಗೆ ಕಝಾಕಿಸ್ತಾನದಾದ್ಯಂತ 4 ಸಾವಿರ ಅರ್ಜಿಗಳು ಬಂದಿದ್ದವು. ಆದ್ರೆ ನಾನು ಅಂತಿಮ ಹಂತ ತಲುಪಿದ್ದೆ ಎಂದು ಇಲೆ ಹೇಳಿದ್ದಾನೆ.
ಇಲೆ ಸತ್ಯವನ್ನು ಬಹಿರಂಗಪಡಿಸಿದ ನಂತರ ಆತನನ್ನು ಫೈನಲಿಸ್ಟ್ ಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಲೆ ಜಾಗಕ್ಕೆ ಆತನ ನಂತರದ ಸ್ಥಾನ ಪಡೆದಿದ್ದ ಐಕೆರಿಮ್ ತೆಮಿರ್‍ಖನೋವಾ ಎಂಬಾಕೆಯನ್ನ ತರಲಾಗಿದೆ. ಸೆಮಿ ಫೈನಲ್ಸ್ ನಲ್ಲಿ ಐಕೆರಿಮ್ 1975 ಪಡೆದಿದ್ರೆ, ನಕಲಿ ಅರಿನಾ ಗೆ 2012 ಮತಗಳು ಬಂದಿದ್ದವು. ಅರಿನಾ ನಿಜವಾಗ್ಲೂ ಹುಡುಗಿ ಎಂದುಕೊಂಡು ಸ್ಪರ್ಧೆಯಲ್ಲಿ ಗೆಲ್ಲಿಸಲು ಓಟ್ ಮಾಡಿದ್ದ ಜನ ಈಗ ಕಕ್ಕಾಬಿಕ್ಕಿಯಾಗಿದ್ದಾರೆ.
ಕಳೆದ ವರ್ಷ ರಷ್ಯಾದಲ್ಲಿ ಪುರುಷ ವಿದ್ಯಾರ್ಥಿ ಆಂಡ್ರಿ ನಗೋರ್ನಿ(20) ಒಳುಡುಪುಗಳ ಮಾಡೆಲ್ ಆಗಿ ಸ್ಪರ್ಧೆ ಗೆದ್ದಿದ್ದ. ತನ್ನ ಗರ್ಲ್ ಫ್ರೆಂಡ್ ಒಳುಡುಪು ಹಾಗೂ ಮೇಕಪ್ ಬಳಸಿದ್ದ ಆತ, ತನ್ನನ್ನು ತಾನು ಮಿಸ್ ಅವಕಾಡೋ ಎಂದು ಕರೆದುಕೊಂಡಿದ್ದ.
ಪೆಸಿಫಿಕ್ ಐಲ್ಯಾಂಡ್ ಆಫ್ ಸಖಾಲಿನ್ ನಲ್ಲಿ ನಡೆದ ಸ್ಪರ್ಧೆಯ ನಂತರ ಸತ್ಯ ಗೊತ್ತಾಗಿ ಆಯೋಜಕರು ಆತನಿಂದ ಪ್ರಶಸ್ತಿ ಹಾಗೂ ಪಟ್ಟವನ್ನ ಹಿಂಪಡೆದಿದ್ದರು.