ಚಿಕ್ಕಮಗಳೂರು: ಕಾಫಿನಾಡನಲ್ಲಿ ವಿಶಿಷ್ಟ ಜಾಗವೊಂದಿದೆ. ಅಲ್ಲಿ ಎಂದಿಗೂ ನೀರು ಹರಿಯುವುದು ನಿಂತಿಲ್ಲ. ಹಾಗೆಯೇ ಎಂತಹ ಮಳೆಗಾಲ ಬಂದ್ರೂ ಇಲ್ಲಿ ನೀರು ಜಾಸ್ತಿಯಾಗಲ್ಲ. ಅದೆಂತದ್ದೇ ಬರ ಬಂದ್ರೂ ನೀರು ಹರಿಯುವುದು ಕಡಿಮೆಯಾಗಲ್ಲ.
ಹೌದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಬಳಿ ಈ ವಿಶಿಷ್ಟ ಜಾಗದ ಹೆಸರೇ ಸೀತಾವನ. ನೋಡೋಕೆ ದೊಡ್ಡ ಜಲಪಾತದಂತಿಲ್ಲದಿದ್ದರು ಈ ವನ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಯಾಕಂದ್ರೆ, ಈ ಜಾಗದಲ್ಲಿ ನೀವು ಕಲ್ಲು, ನಾಣ್ಯ ಅಥವ ಮರದ ಕೋಲು ಏನನ್ನೇ ಹಾಕಿದರೂ ನಾಲ್ಕೈದು ದಿನದಲ್ಲಿ ಅದರ ಮೇಲೆ ಸುಣ್ಣದ ಅಂಶದಂತೆ ಬೆಳೆಯುತ್ತದೆ. ಹೀಗೆ ಬೆಳೆಯೋದಕ್ಕೂ ಶತಮಾನಗಳ ಆಯಸ್ಸಿದೆ. ರಾಮಾಯಣದ ಕಾಲದಲ್ಲಿ ಸೀತೆ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸ್ನಾನ ಮಾಡಿದ್ದಳು. ಆಗ ಎಲೆ-ಅಡಿಕೆ ಹಾಕಿಕೊಂಡ ಸೀತೆ ಇಲ್ಲಿ ಸುಣ್ಣವನ್ನ ಹಾಕಿದ್ದಳು. ಅಂದಿನಿಂದ ಈ ಜಾಗದಲ್ಲಿ ಏನೇ ವಸ್ತುಬಿದ್ರೂ ಅದರ ಮೇಲೆ ಸುಣ್ಣದ ಅಂಶ ಬೆಳೆಯುತ್ತೆ ಅನ್ನೋದು ಸ್ಥಳೀಯರ ನಂಬಿಕೆ. ಸುತ್ತಲೂ ಕಾಫಿತೋಟದ ಮಧ್ಯದಲ್ಲಿ ಹಂತ ಹಂತವಾಗಿ ಧುಮ್ಮಿಕ್ಕುವ ನೀರು ಘಳಿಗೆಗೊಂದು ಹೊಸ-ಹೊಸ ಸಂಗೀತ ಸೃಷ್ಠಿಸುತ್ತೆ. ಈ ಜಾಗ ಅಷ್ಟಾಗಿ ಪರಿಚಿತವಲ್ಲದಿರೋದರಿಂದ ಸ್ಥಳೀಯ ಪ್ರವಾಸಿ ಪ್ರಿಯರಷ್ಟೆ ಆಗಾಗ ಭೇಟಿ ನೀಡಿ ಎಂಜಾಯ್ ಮಾಡ್ತಾರೆ.
Advertisement
Advertisement
ಜಯಪುರದಿಂದ ಕೊಪ್ಪ ಹೋಗುವ ಮಾರ್ಗದಲ್ಲಿ ಅಲಗೇಶ್ವರ ಎಸ್ಟೇಟ್ ಮಾರ್ಗದಲ್ಲಿ ಏಳೆಂಟು ಕಿ.ಮೀ. ಸಾಗಿದ್ರೆ ಸೀತಾವನ ಸಿಗುತ್ತದೆ. ಐದನೇ ಶತಮಾನದಲ್ಲಿ ಸೀತೆ ಸ್ನಾನ ಮಾಡಿದಾಗ ಈ ಜಾಗ ಹೇಗಿತ್ತೋ ಇಂದಿಗೂ ಹಾಗೇ ಇದೆ. ನೀರು ಹರಿಯುವ ಜಾಗದ ಸುತ್ತಲೂ ಸುಣ್ಣದಂತೆ ಭಾಸವಾಗುವ ಪಾಚಿ ಬೆಳೆದಿದ್ದು, ತೇವಾಂಶ ಎಷ್ಟೇ ಹೆಚ್ಚಿದ್ರು ಮಣ್ಣು ಜರುಗದಂತೆ ಕಲ್ಲಿನಂತಾಗಿದೆ. ಸುಣ್ಣದ ಅಂಶದಿಂದ ಗಟ್ಟಿಯಾಗಿರುವುದರಿಂದ ಸದಾ ನೀರು ಹರಿಯುತ್ತಿದ್ದರು ಇದರ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ನೀರು ನಿಂತಿರೋದನ್ನಾಗಲಿ ಅಥವ ಕಡಿಮೆಯಾಗಿರೋದನ್ನಾಗಲಿ ಇಲ್ಲಿವರೆಗೂ ಯಾರೂ ನೋಡಿಲ್ಲ. ವರ್ಷಪೂರ್ತಿ ನೀರು ಇಷ್ಟೇ ಪ್ರಮಾಣದಲ್ಲಿ ಹರಿಯುತ್ತದೆ. ಕಡಿಮೆಯೂ ಆಗಲ್ಲ, ಹೆಚ್ಚು ಆಗಲ್ಲ. ಆದ್ರೆ, ಈ ಜಾಗ ಅಷ್ಟಾಗಿ ಜನಮಾನಸಕ್ಕೆ ಬಂದಿಲ್ಲ. ಸ್ಥಳೀಯರಿಗಷ್ಟೆ ಗೊತ್ತು. ಅಲ್ಲದೆ ತೋಟದ ಮಾಲೀಕರು ಕೂಡ ಯಾವುದೇ ನಿರ್ಬಂಧ ಹೇರದಿರುವುದರಿಂದ ಇಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ.
Advertisement
Advertisement
ಇಲ್ಲಿ ಸೀತೆ ಸ್ನಾನ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಸುಣ್ಣ ಹಾಕಿದ್ದಳೋ ಇಲ್ಲವೋ ಅದೂ ಗೊತ್ತಿಲ್ಲ. ಅದನ್ನ ಕಣ್ಣಾರೆ ಕಂಡೋರು ಇಲ್ಲ. ಆದ್ರೆ ಅದೊಂದು ನೂರಾರು ವರ್ಷಗಳಿಂದ ಜನರ ನಂಬಿಕೆಯಷ್ಟೆ. ಆದ್ರೆ, ಇಲ್ಲಿ ಶತಮಾನಗಳಿಂದ ನೀರು ನಿರಂತರವಾಗಿ ಹರಿಯುತ್ತಿರೋದಂತು ಸತ್ಯ. ಸೀತೆಯ ಹೆಸರನ್ನಿಟ್ಟಿಕೊಂಡಿರೋ ಈ ಜಾಗವಂತು ಅದ್ಭುತ. ನೋಡೋಕೆ ತುಸು ಚಿಕ್ಕದಿದ್ದರೂ ಈ ಜಾಗದ ಅನುಭವವೇ ಬೇರೆ. ಹೀಗಾಗಿ ನೆಕ್ಸ್ಟ್ ಟೈಂ ಕಾಫಿನಾಡಿಗೆ ಬಂದಾಗ ಈ ತಾಣವನ್ನ ಮಿಸ್ ಮಾಡ್ಕೋಬೇಡಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv