ಚಾರ್ಮಾಡಿಯಲ್ಲಿ ಅರಳಿ ನಿಂತ ನೀಲಾಂಜನಿ ಕುರಂಜಿ

Public TV
1 Min Read
ckm 12 years flower 1

-12 ವರ್ಷಗಳಿಗೊಮ್ಮೆ ಅರಳುವ ಹೂವು

ಚಿಕ್ಕಮಗಳೂರು: ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಹಾಡು ಕಾಫಿನಾಡಿನಲ್ಲಿ ಅಕ್ಷರಶಃ ಸತ್ಯವಾಗಿದೆ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೇ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದೆದುರು ಉಳಿದದೆಲ್ಲವು ನಶ್ವರವೇ ಸರಿ ಎನಿಸುವಂತೆ ಕಾಫಿನಾಡಲ್ಲಿ ಅಪರೂಪದ ಹೂವೊಂದು ಅರಳಿ ನಿಂತು, ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ.

ಹೌದು. 12 ವರ್ಷಗಳಿಗೊಮ್ಮೆ ಅರಳುವ ಕುರಂಜಿ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲ ಕಾಣೋ ಅಪರೂಪದ ಕುರಂಜಿ ನೋಡುಗರ ಕಣ್ಮನ ಸೆಳೆಯೋದರ ಜೊತೆಗೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ckm 12 years flower

ಮುಂಗಾರು ಮಳೆಯಿಂದಾಗಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅನುಪಮ ಸೌಂದರ್ಯ ತುಂಬಿಕೊಂಡಿದೆ. ಅದರಲ್ಲೂ, 12 ವರ್ಷಗಳಿಗೊಮ್ಮೆ ಅರಳೋ ಕುರಂಜಿಯಿಂದಾಗಿ ಚಂದ್ರದ್ರೋಣ ಪರ್ವತ, ದೇವರ ಮನೆ ಬೆಟ್ಟ, ಚಾರ್ಮುಡಿ ಬೆಟ್ಟ ಸೇರಿದಂತೆ ಕಾಫಿನಾಡ ಬೆಟ್ಟಗುಡ್ಡಗಳು ಎಲ್ಲರ ಕಣ್ಮನ ಸೆಳೆಯುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ನೀಲಾಂಜಲಿಯೇ ಕಾಣುತ್ತಿದ್ದು, ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಚಿಕ್ಕಮಗಳೂರಿನತ್ತ ಹರಿದು ಬರುತ್ತಿದೆ.

ckm 12 years flower 2

ಧಾರ್ಮಿಕ ಇತಿಹಾಸ ಹೊಂದಿರೋ ಈ ಹೂವು ಅರಳಿದ ಕೂಡಲೇ ಸುಬ್ರಹ್ಮಣ್ಯ ದೇವರಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಕುರಂಜಿ ಅರಳುತ್ತೆ. ಇದಕ್ಕೆ ಗುರ್ಗಿ ಅನ್ನೋ ಹೆಸರು ಕೂಡ ಇದ್ದು, ಇದರಲ್ಲಿ ನಾನಾ ವಿಧಗಳಿವೆ. 5, 7, 12, 14 ವರ್ಷಗಳಿಗೆ ಅರಳೋ ಪ್ರಭೇದದ ಹೂವುಗಳೂ ಇವೆ. ಈ ಹೂವುಗಳು ಅರಳಿದಾಗ ಕಾಂಡದಲ್ಲಿ ಔಷಧಿಯ ಗುಣಗಳನ್ನು ಹೊಂದಿರುತ್ತದೆ. ಹೀಗಾಗಿ ನಾನಾ ಕಾಯಿಲೆಗೂ ಇದನ್ನು ಬಳಸುತ್ತಾರೆ. ವರುಣನ ಆರ್ಭಟಕ್ಕೆ ಪ್ರವಾಹ, ಭೂಕುಸಿತದಿಂದ ಭೀತಿಗೊಂಡಿರೋ ಕಾಫಿನಾಡಿನ ಜನ ಈಗ ಕುರಂಜಿ ನೋಡಿ ಮಂದಸ್ಮಿತರಾಗ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *