ದಾವಣಗೆರೆ: ನೀವು ಹೋಟೆಲ್, ಮದುವೆ ಸಮಾರಂಭಗಳಿಗೆ ಕಮರ್ಷಿಯಲ್ ಸಿಲಿಂಡರ್ ತರಿಸುತ್ತಾ ಇದ್ದೀರಾ.. ಹಾಗಾದ್ರೆ ಈ ಸುದ್ದಿ ನೀವು ಓದಲೇಬೇಕು. ಗ್ಯಾಸ್ ಏಜೆನ್ಸಿಗಳಿಂದ ನಿಮ್ ಕೈ ಸೇರುವುದರೊಳಗೆ ಗ್ಯಾಸ್ ಕಳ್ಳತನವಾಗುತ್ತದೆ.
ಈಗೆಲ್ಲ ಫಾಸ್ಟ್ ಜಮಾನ. ಕಟ್ಟಿಗೆ, ಒಲೆ ಎಂದು ಕೂರುವ ಬದಲು ಮದುವೆ ಸಮಾರಂಭಗಳಿಗೆ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಿ ಕಾರ್ಯಕ್ರಮ ಮುಗಿಸಿಬಿಡುತ್ತಾರೆ. ಆದರೆ ಇದಕ್ಕೂ ಮುನ್ನ ಈ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಭರ್ತಿಯಾಗಿರುತ್ತಾ ಅನ್ನೋದನ್ನ ನಾವು ಪರೀಕ್ಷಿಸಬೇಕಿದೆ. ಯಾಕೆಂದರೆ ಮಾರ್ಗ ಮಧ್ಯೆನೇ ಗ್ಯಾಸ್ ಕದಿಯೋ ಕೆಲಸವನ್ನ ಏಜೆನ್ಸಿ ಸಿಬ್ಬಂದಿ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬಹುತೇಕ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಖತರ್ನಾಕ್ ಕೆಲಸಕ್ಕಿಳಿದಿದ್ದಾರೆ. ಸಿಬ್ಬಂದಿ ಮಾರ್ಗ ಮಧ್ಯದಲ್ಲಿಯೇ ತುಂಬಿರುವ ಸಿಲಿಂಡರ್‍ಗಳನ್ನು ಖಾಲಿ ಸಿಲಿಂಡರ್‍ಗೆ ಡಂಪ್ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ.
ಯುವಕ: ಏನ್ ಮಾಡ್ತಾ ಇದ್ದೀರಣ್ಣ. ಎಮ್ಟಿಗೆ ಹಾಕ್ತಾ ಇದ್ದೀರಾ.. ತುಂಬಿದ್ದೆಲ್ಲ ಅರ್ಧರ್ಧ ಮಾಡಿ ಒಂದ್ರಲ್ಲಿ ತುಂಬ್ತಾ ಇದ್ದೀರಾ..?
ಗ್ಯಾಸ್ ಏಜೆನ್ಸಿ ಸಿಬ್ಬಂದಿ: ಖಾಲಿವು ಇದ್ವು..
ಯುವಕ: ಅದೇನಪ್ಪ ಹೊಲದಲ್ಲಿ ಬಂದು ಮನೆಗೆ ಹಾಕ್ತಾ ಇದ್ದೀರಾ..? ಹೋ.. ಹೊಲ್ದಾಗೆ ಬಂದು ಮನೆಗೆ ಹಾಕ್ತಾ ಇದೀರಾ.. ಅದೇನಪ್ಪ ಜನಗಳಿಗೆಲ್ಲ ತುಂಬಿದೆ ಅಂತ ಕೊಟ್ಟುಬಿಟ್ಟು ಅರ್ಧರ್ಧ ನೀವು ಖಾಲಿ ಮಾಡ್ಕೊಂಡು.
ಸಿಬ್ಬಂದಿ: ಅಲ್ಲಣ್ಣ.. ಇದು.. ಸಮಾಧಾನ ಇವು.. ಮದುವೆವು..
ಯುವಕ: ಮದುವೆವೂ..
ಸಿಬ್ಬಂದಿ: ಹುಃ ಅಣಾ.. ಚೌಟ್ರಿವು ಇವು
ಯುವಕ: ಚೌಟ್ರಿವೇನು..?
ಸಿಬ್ಬಂದಿ: ಏ.. ತಗಿಯಣ..
ಯುವಕ: ನಿಮ್ಮುನ್ನಾ ಬಹಳ ಸರಿ ನೋಡಿದ್ದೀನಿ ಇಲ್ಲಿ.
ಸಿಬ್ಬಂದಿ: ಏಯ್ ತಗಿಯಣ..
ಯುವಕ: ತಡಿ ತಡಿ.. ಅಯ್ಯೋ.. ನಿನ್ನ..
ಸಿಬ್ಬಂದಿ: ಅಯ್ಯೋ ಬಿಡಣ್ಣ.. ಹೊಟ್ಟೆಪಾಡಿಗೆ ಮಾಡ್ಕೋತೀವಿ..
ಯುವಕ: ಹೊಟ್ಟೆ ಪಾಡಿಗೆ ಮಾಡ್ಕಾ…
ಹೀಗೆ ತುಂಬಿದ ಸಿಲಿಂಡರ್‍ಗಳನ್ನು ಅರ್ಧಕ್ಕೆ ಮಾಡಿ ಗ್ರಾಹಕರಿಗೆ ಯಾವ ರೀತಿ ಯಾಮಾರಿಸುತ್ತಿದ್ದಾರೆ. ಗೋದಾಮ್‍ನಿಂದ ಸಿಲಿಂಡರ್ ತರೋದು ಅಲ್ಲೇ ಹತ್ತಿರ ಇರೋ ತೋಟಗಳಿಗೆ ಹೋಗಿ ಖಾಲಿ ಸಿಲಿಂಡರ್‍ಗೆ ಡಂಪ್ ಮಾಡಿಕೊಳ್ಳೋದು. ಇದೇ ಇವರ ನಿತ್ಯದ ಕೆಲಸವಾಗಿದೆ. ಗ್ರಾಹಕರು ಮಾತ್ರ ದುಪ್ಪಟ್ಟು ಹಣ ನೀಡಿ ಕಮರ್ಷಿಯಲ್ ಸಿಲಿಂಡರ್‍ಗಳನ್ನು ತರಿಸಿ ಮೋಸಕ್ಕೆ ಒಳಗಾಗುತ್ತಿದ್ದಾರೆ.
ಒಟ್ಟಿನಲ್ಲಿ ಯಾವುದೇ ಸಭೆ ಸಮಾರಂಭ, ಮದುವೆಗಳಿಗೆ ಸಿಲಿಂಡರ್ ತರಿಸುವುದಕ್ಕೂ ಮುನ್ನ ಸ್ವಲ್ಪ ಯೋಚಿಸಿ. ಗ್ಯಾಸ್ ತೂಕ ಪರಿಶೀಲಿಸಿ. ಇಲ್ಲಾಂದ್ರೆ ಯಾಮಾರೋದು ಗ್ಯಾರಂಟಿ.