ಬೆಂಗಳೂರು: ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ಏನಾದರೂ ಮೆಸೇಜ್ ಬಂದರೆ ಹುಷಾರಾಗಿರಿ. ಒಂದೇ ಒಂದು ಕ್ಷಣ ಯಾಮಾರಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಸಂಪೂರ್ಣ ಖಾಲಿ ಆಗಲಿದೆ.
ಹೌದು. ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ಬಹುದೊಡ್ಡ ವಂಚನೆ ನಡೆಯುತ್ತಿದೆ. ನೂ ಮೂಡ್ ಆಥ್ ಬ್ಯಾಂಕ್ ಹೆಸರಿನಲ್ಲಿ ವಂಚಕರು ಜನರನ್ನು ವಂಚಿಸುತ್ತಿದ್ದಾರೆ. ಆದಾಯ ತೆರಿಗೆಯ ರೀಫಂಡ್ ಅಪ್ರವ್ಡೂ (Income tax refund approved) ಹೆಸರಿನ ಲಿಂಕಿನ ಮೇಸೆಜ್ ನಿಮ್ಮ ಮೊಬೈಲಿಗೆ ಬರುತ್ತದೆ. ಅಷ್ಟೇ ಅಲ್ಲದೇ ಆ ಲಿಂಕಿಗೆ ನಿಮ್ಮ ಬ್ಯಾಂಕಿನ ವಿವರಗಳನ್ನು ಹಾಕುವಂತೆ ಹೇಳುತ್ತಾರೆ.
ಒಂದು ವೇಳೆ ನೀವು ಯಾಮಾರಿ ನಿಮ್ಮ ಬ್ಯಾಂಕಿನ ವಿವರಗಳನ್ನು ಹಾಕಿದರೆ ಲಿಂಕ್ ಒಪನ್ ಮಾಡುತ್ತಿದ್ದಂತೆ ನಿಮ್ಮ ಖಾತೆಯಿಂದ ದುಡ್ಡು ಕಟ್ ಆಗಿರುವ ಮೆಸೇಜ್ ಬರುತ್ತದೆ. ನಕಲಿ ಆದಾಯ ತೆರಿಗೆ ಮೆಸೇಜ್ ನಂಬಿ ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಮೋಸ ಹೋಗುತ್ತಿದ್ದಾರೆ.
ಮೋಸ ಹೋದವರು ಪೊಲೀಸರ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ಈ ಬಗ್ಗೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.