ಕಾರವಾರ: ಚುನಾವಣಾ ಆಯೋಗ ಮತದಾರರ ಜಾಗೃತಿಗಾಗಿ ಕೋಟಿಗಟ್ಟಲೇ ಖರ್ಚು ಮಾಡಿ ಮತದಾನ ಮಾಡಿ ಎಂದು ಪ್ರಚಾರ ಮಾಡುತ್ತವೆ. ಆದರೆ ಬಹಳಷ್ಟು ಜನರು ಮತದಾನದ ದಿನ ರಜೆ ಸಿಕ್ಕಿತು ಎಂದು ಮತದಾನ ಮಾಡದೇ ಪ್ರವಾಸಕ್ಕೆ ತೆರಳೋದು ಇಲ್ಲವೇ ಮಜಾ ಮಾಡಿಕೊಂಡು ಎಲ್ಲೆಲ್ಲೋ ಇರುತ್ತಾರೆ. ಇಂತವರಿಗಾಗಿ ಹೋಟೆಲ್ ಮಾಲೀಕರೊಬ್ಬರು ತಮ್ಮ ಹೋಟೆಲ್ ನಲ್ಲಿ ಮತದಾನ ಮಾಡದ ಪ್ರವಾಸಿಗರಿಗೆ ಊಟ ನೀಡುವುದಿಲ್ಲ ಎಂದು ಬೋರ್ಡ್ ಹಾಕಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಹೋಟೆಲ್ ಮಾಲೀಕರೊಬ್ಬರು ಈ ರೀತಿ ಬೋರ್ಡ್ ಹಾಕಿದ್ದಾರೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರುವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದ್ದರೂ ಇಲ್ಲಿನ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಜನರಷ್ಟೇ ಅಲ್ಲದೆ ಇಲ್ಲಿನ ಪ್ರಸಿದ್ಧ ಓಂ ಬೀಚ್, ಕುಡ್ಲೆ ಬೀಚ್‍ಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ. ಹೀಗಾಗಿ ರಜೆ ದಿನದಲ್ಲಿ ಈ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಇದನ್ನೂ ಓದಿ: ಮತದಾನ ಮಾಡದೇ ಪ್ರವಾಸಕ್ಕೆ ಬಂದ್ರೆ ಹುಷಾರ್!
Advertisement
Advertisement
ಕರ್ನಾಟಕದಲ್ಲಿ ಏ.18 ಹಾಗು 23 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಜೆ ಇದ್ದು ಆ ದಿನ ಬಹಳಷ್ಟು ಜನರು ಮೋಜು ಮಸ್ತಿಗಾಗಿ ಗೋಕರ್ಣಕ್ಕೆ ಬರುತ್ತಾರೆ. ಹೀಗಾಗಿ ಇದನ್ನು ಮನಗಂಡ ಇಲ್ಲಿನ ಪೈ ರೆಸ್ಟೋರೆಂಟ್ ಹೋಟೆಲ್‍ನವರು ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದು, ಮತದಾನದ ದಿನ ಮತದಾನ ಮಾಡದೇ ಬರುವ ಪ್ರವಾಸಿಗರಿಗೆ ಯಾವುದೇ ಊಟ, ಉಪಹಾರ ನೀಡದಿರಲು ನಿರ್ಧರಿಸಿದ್ದಾರೆ.
Advertisement
Advertisement
ಈ ಕುರಿತು ಜಾಗೃತಿ ಪತ್ರ ಮುದ್ರಿಸಿ ಗೋಡೆಗೆ ಅಂಟಿಸಿರುವ ಮಾಲೀಕರು, ಆ ದಿನ ಮತದಾರರು ತಮ್ಮ ಊರಿನಲ್ಲಿಯೇ ಇದ್ದು ಮತದಾನ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಒಂದು ವೇಳೆ ಮತದಾನ ಮಾಡದೇ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದರೇ ಅಂತವರಿಗೆ ಈ ಹೋಟೆಲ್‍ನಲ್ಲಿ ಊಟ ಸಹ ನೀಡದಿರಲು ತೀರ್ಮಾನಿಸಿ ಈ ಮೂಲಕ ಮತದಾನದ ಜಾಗೃತಿ ಮೂಡಿಸುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಮತದಾನದ ಜಾಗೃತಿಗಾಗಿ ಜಿಲ್ಲಾಡಳಿತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮತದಾನ ಮಾಡುವಂತೆ ಜನರಲ್ಲಿ ವಿನಂತಿಸಿಕೊಳ್ಳುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹೋಟೆಲ್ ನವರು ಮತದಾನ ಮಾಡದ ಜನರಿಗೆ ಊಟ ನೀಡುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡು ನಾಮಫಲಕ ಹಾಕಿ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.