ವಾಟ್ಸಪ್‌ ಫೋಟೋ ಡೌನ್‌ಲೋಡ್‌ ಮಾಡೋ ಮುನ್ನ ಎಚ್ಚರವಾಗಿರಿ – ನಿಮ್ಮ ಫೋನ್‌ ಹ್ಯಾಕ್‌ ಆಗಬಹುದು!

Public TV
2 Min Read
WhatsApp scam

ನವದೆಹಲಿ: ವಾಟ್ಸಪ್‌ನಲ್ಲಿ (WhatsApp) ಬರುವ ಎಲ್ಲಾ ಚಿತ್ರಗಳನ್ನು (Photo) ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರವಾಗಿರಿ. ಡೌನ್‌ಲೋಡ್‌ ಆದ ಚಿತ್ರದಿಂದಲೇ ನಿಮ್ಮ ಫೋನ್‌ (Phone) ಹ್ಯಾಕ್‌ ಆಗುವ ಸಾಧ್ಯತೆಯಿದೆ.

ಹೌದು. ಇಲ್ಲಿಯವರೆಗೆ ಲಿಂಕ್‌, ಇತ್ಯಾದಿಗಳನ್ನು ಕಳುಹಿಸಿ ಸೈಬರ್‌ ಕಳ್ಳರು ಫೋನ್‌ ಹ್ಯಾಕ್‌ (Hack) ಮಾಡುತ್ತಿದ್ದರು. ಆದರೆ ತಂತ್ರಜ್ಞಾನ ಮುಂದುವರಿದಂತೆ ಫೋಟೋವನ್ನು ಕಳುಹಿಸಿ ಹ್ಯಾಕ್‌ ಮಾಡುತ್ತಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಹ್ಯಾಕರ್‌ಗಳು ಒಂದು ಫೋಟೋವನ್ನು ಸೃಷ್ಟಿಸಿ ಅದರಲ್ಲಿ ಮಾಲ್ವೇರ್‌ (ಕುತಂತ್ರಾಂಶ) ತುರುಕಿಸಿ ಕಳುಹಿಸುತ್ತಾರೆ. ಈ ಫೋಟೋವನ್ನು ವಾಟ್ಸಪ್‌ನಲ್ಲಿ ಯಾರೆಲ್ಲ ಡೌನ್‌ಲೋಡ್‌ ಮಾಡುತ್ತಾರೋ ಅವರ ಫೋನ್‌ ಹ್ಯಾಕ್‌ ಆಗುತ್ತದೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್‌, ಮೊಬೈಲ್‌ ಬೆಲೆ!

Cyber Crime

ಈ ಮಾಲ್ವೇರ್‌ (Malware) ಪಾಸ್‌ವರ್ಡ್‌, ಒಟಿಪಿ ಮತ್ತು UPI ವಿವರಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕೆಲವೊಮ್ಮೆ ಸೈಬರ್‌ ಕ್ರಿಮಿನಲ್‌ಗಳು ಫೋನನ್ನೇ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಮಧ್ಯಪ್ರದೇಶದ ಜಬಲ್ಪುರದಲ್ಲಿ ವ್ಯಕ್ತಿಯೊಬ್ಬರು ಅಪರಿಚಿತ ಸಂಖ್ಯೆಯಿಂದ ವಾಟ್ಸಪ್‌ ಸಂದೇಶವನ್ನು ಸ್ವೀಕರಿಸಿದ ಮೇಲೆ ಸುಮಾರು 2 ಲಕ್ಷ ರೂ. ಹಣವನ್ನು ಕಳೆದುಕೊಂಡ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಏನಿದು ಘಿಬ್ಲಿ? ದಿಢೀರ್‌ ಫೇಮಸ್‌ ಆಗಿದ್ದು ಹೇಗೆ? ಮೂಲ ಮಾಲೀಕನ ಸಂಪತ್ತು ಎಷ್ಟಿದೆ?

ವಾಟ್ಸಪ್‌ ಸಂದೇಶದಲ್ಲಿ ಫೋಟೋದಲ್ಲಿರುವ ಯಾರನ್ನಾದರೂ ಗುರುತಿಸಲು ಸಹಾಯ ಮಾಡುವಂತೆ ಕೋರಲಾಗಿತ್ತು. ಆ ಸಂಖ್ಯೆಯಿಂದ ಪದೇ ಪದೇ ಫಾಲೋ-ಅಪ್ ಕರೆಗಳ ನಂತರ, ಆ ವ್ಯಕ್ತಿ ಅಂತಿಮವಾಗಿ ಚಿತ್ರದ ಮೇಲೆ ಕ್ಲಿಕ್ ಮಾಡಿದ್ದಾರೆ. ಫೋಟೋ ಕ್ಲಿಕ್‌ ಮಾಡಿದ ಕೂಡಲೇ ಫೋನ್‌ ಹ್ಯಾಕ್‌ ಆಗಿದೆ. ಮಾಲ್ವೇರ್‌ ತಕ್ಷಣವೇ ಫೋನ್‌ ಪ್ರವೇಶಿಸಿ ವ್ಯಕ್ತಿಗೆ ತಿಳಿಯದೇ ಹಣಕಾಸಿನ ವಹಿವಾಟು ನಡೆಸಿದೆ.

cybercrime

ಏನಿದು ಮಾಲ್ವೇರ್‌?
ಮಾಲ್ವೇರ್‌ ಎಂಬುದು ಮ್ಯಾಲಿಶಿಯಸ್ ಸಾಫ್ಟ್‌ವೇರ್ ಎಂಬುದರ ಸಂಕ್ಷಿಪ್ತ ರೂಪ. ಇದು ಫೋನ್‌ ಮಾಲೀಕನ ಒಪ್ಪಿಗೆ ಇಲ್ಲದೇ ಆತನ ಫೋನ್‌ ಒಳಗೆ ಕದ್ದು ನುಸುಳುವಂತೆ ಅಥವಾ ಅದಕ್ಕೆ ಹಾನಿಯೆಸಗುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ತಂತ್ರಾಂಶ.

ಮಾಲ್ವೇರ್‌ನಿಂದ ಪಾರಾಗೋದು ಹೇಗೆ?
– ಅಪರಿಚಿತ ಅಥವಾ ಪರಿಶೀಲಿಸದ ಸಂಖ್ಯೆಗಳಿಂದ ಬರುವ ಚಿತ್ರಗಳು, ವಿಡಿಯೋಗಳನ್ನು ಡೌನ್‌ಲೋಡ್ ಮಾಡಬೇಡಿ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಲೇಬೇಡಿ.
– ವಾಟ್ಸಪ್‌ ಸೆಟ್ಟಿಂಗ್ಸ್‌ನಲ್ಲಿ ಮೀಡಿಯಾಗೆ ಹೋಗಿ auto-download ಅನ್ನು ಆಫ್‌ ಮಾಡಿ.
– ಅನುಮಾನಾಸ್ಪದ ಸಂಖ್ಯೆಗಳನ್ನು ತಕ್ಷಣ ರಿಪೋರ್ಟ್‌  ಮಾಡಿ ಮತ್ತು ನಿರ್ಬಂಧಿಸಿ.
– ಸ್ನೇಹಿತರು ಮತ್ತು ಕುಟುಂಬಕ್ಕೆ, ವಿಶೇಷವಾಗಿ ತಂತ್ರಜ್ಞಾನದ ಬಗ್ಗೆ ಕಡಿಮೆ ಜ್ಞಾನವಿರುವವರಿಗೆ ಈ ರೀತಿಯ ಅಪಾಯಗಳ ಬಗ್ಗೆ ಮಾಹಿತಿ ನೀಡಿ.
– ನಿಮ್ಮನ್ನು ಗುರಿಯಾಗಿಸಿಕೊಂಡಿದ್ದರೆ, ಘಟನೆಯನ್ನು ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ವರದಿ ಮಾಡಿ: www.cybercrime.gov.in

Share This Article