ಮಂಡ್ಯ: ಅವಧಿ ಮೀರಿದ ಮದ್ಯ ಸೇವನೆ ಮಾಡಿ ನಾಲ್ವರು ಅಸ್ವಸ್ಥರಾಗಿದ್ದು, ಈಗ ಮೈಸೂರಿನ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಕೃಷ್ಣಾಪುರದ ನಿವಾಸಿಗಳಾದ ಮಹದೇವ್, ಸುರೇಶ್, ತಮ್ಮಯ್ಯ ಮತ್ತು ಪರೇಗೌಡನಕೊಪ್ಪಲು ಯೋಗೇಶ್ ಮಂಗಳವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಕೃಷ್ಣಾಪುರದ ಪೆಟ್ಟಿಗೆ ಅಂಗಡಿಯೊಂದರಲ್ಲಿ ಮದ್ಯವನ್ನು ಖರೀದಿಸಿ ಸೇವಿಸಿದ್ದರು.
ಮದ್ಯ ಸೇವಿಸಿದ ಅರ್ಧ ಗಂಟೆಯಲ್ಲೇ ಹೊಟ್ಟೆ ನೋವು, ವಾಂತಿ, ಬೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಕಿಕ್ಕೇರಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೊಲೀಸರ ಹೆಚ್ಚಿನ ತನಿಖೆಯಿಂದ ನಿಖರವಾದ ಕಾರಣ ತಿಳಿದು ಬರಬೇಕಾಗಿದೆ. ಈ ಹಿಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು, ಮಹಿಳಾ ಸಂಘಟನೆಗಳು ಹೋರಾಟ ಮಾಡಿದ್ದರೂ ಸಹ ಕ್ರಮಕೈಗೊಂಡಿರಲಿಲ್ಲ.