Connect with us

Bengaluru City

ಭಾರತದ ಕಿರಿಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ವೆಂಕಟೇಶ್ ಪ್ರಸಾದ್ ರಾಜೀನಾಮೆ

Published

on

ಬೆಂಗಳೂರು: ಭಾರತ ಕ್ರಿಕೆಟ್ ತಂಡದ 90 ರ ದಶಕದ ಪ್ರಖ್ಯಾತ ಬೌಲರ್ ವೆಂಕಟೇಶ್ ಪ್ರಸಾದ್, ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

2001 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ವೆಂಕಟೇಶ್ ಪ್ರಸಾದ್ ಈಗ ಆಯ್ಕೆ ಸಮಿತಿಗೆ ರಾಜೀನಾಮೆ ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಈ ವರ್ಷದ ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇವರ ಪಾತ್ರ ಅಪಾರವಾಗಿತ್ತು. ಕಳೆದ 30 ತಿಂಗಳಿನಿಂದ ಬಿಸಿಸಿಐನ ಕಿರಿಯರ ಆಯ್ಕೆ ಸಮಿತಿಯಲ್ಲಿದ್ದರು.

ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, “ನಾನು ವೆಂಕಟೇಶ್ ಪ್ರಸಾದ್ ಅವರ ಜೊತೆ ಮಾತನಾಡಿ ತಮ್ಮ ನಿರ್ಧಾರವನ್ನ ಮತ್ತೊಮ್ಮೆ ಮರುಪರಿಶೀಲಿಸಲು ಹೇಳಿದೆ. ಆದರೆ ವೆಂಕಟೇಶ್ ಅವರು ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. ಬಿಸಿಸಿಐ ವೆಂಕಟೇಶ್ ಅವರ ಸಾಧನೆಗೆ ಹೆಮ್ಮೆ ಪಟ್ಟಿದ್ದು, ಅವರ ಮುಂದಿನ ಜೀವನಕ್ಕೆ ಶುಭಕೋರುವೆವು” ಎಂದು ಹೇಳಿದರು.

ಮೂಲಗಳ ಪ್ರಕಾರ ವೆಂಕಟೇಶ್ ಪ್ರಸಾದ್ ಅವರು ಬಿಸಿಸಿಐ ಜೊತೆಗಿನ ಶೀತಲ ಸಮರದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ನಿಯಮದ ಪ್ರಕಾರ ಬಿಸಿಸಿಐ ಹುದ್ದೆಯಲ್ಲಿ ಇರುವವರು ಯಾವುದೇ ಖಾಸಗಿ ಮತ್ತು ಬೇರೆ ಕೋಚಿಂಗ್ ಸಂಸ್ಥೆಗಳ ಜೊತೆ ಒಡನಾಟ ಬೆಳೆಸಿಕೊಳ್ಳುವಂತಿಲ್ಲ. ಈ ನಿಯಮವು ರಾಷ್ಟ್ರ ಮತ್ತು ರಾಜ್ಯ ಫ್ರಾಂಚೈಸ್ ಆಧಾರಿತ ಲೀಗ್ ಗಳಿಗೆ ಅನ್ವಯವಾಗುತ್ತದೆ. ಆದರೆ ಐಪಿಎಲ್ ವೇಳೆ ವೆಂಕಟೇಶ್ ತಂಡವೊಂದರ ಜೊತೆ ಕೋಚಿಂಗ್ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕೋಚಿಂಗ್‍ಗೆ ಈ ನಿಯಮವು ಅಡ್ಡಿ ಮಾಡುವ ಕಾರಣದಿಂದ ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಮಾಧ್ಯಮದವರು ಈ ವಿಚಾರವಾಗಿ ವೆಂಕಟೇಶ್ ಅವರಿಗೆ ಪ್ರಶ್ನಿಸಿದಾಗ ಉತ್ತರ ನೀಡಲು ನಿರಾಕರಿಸಿದ್ದಾರೆ. ವೆಂಕಟೇಶ್ ಅವರು ಐಪಿಎಲ್ ತಂಡವೊಂದಕ್ಕೆ ಕೋಚ್ ಆಗುತ್ತಾರೆಂಬ ವದಂತಿ ಕೆಲ ದಿನಗಳಿಂದ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.

Click to comment

Leave a Reply

Your email address will not be published. Required fields are marked *