ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಕುರ್ಚಿ ಅಲುಗಾಡುತ್ತಿದೆ ಅನ್ನೋ ವದಂತಿ ಈಗ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಅದ್ರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸೋಲಿನ ಬಳಿಕ ಕೋಚ್ ಬದಲಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ ಎನ್ನಲಾಗ್ತಿದೆ. ಈಚೆಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ಹಾಗೂ ಭಾರತ ಎ ಮತ್ತು ಅಂಡರ್ 19 ತಂಡದ ಮುಖ್ಯ ಕೋಚ್ ಆಗಿರುವ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನ ಸಂಪರ್ಕಿಸಿತ್ತು ಎಂಬ ವದಂತಿಗಳೂ ಹಬ್ಬಿತ್ತು. ಇದಕ್ಕೆ ಈಗ ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ (Devajit Saikia) ಅವರಿಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಗಂಭೀರ ಅವರ ಬಗೆಗಿನ ವದಂತಿಗಳನ್ನ ತಳ್ಳಿಹಾಕಿದ್ದಾರೆ. ಗಂಭೀರ್ ಮುಖ್ಯಕೋಚ್ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ. ಕೋಚ್ ಬದಲಿಸುವ ಯಾವುದೇ ನಿರ್ಧಾರ ಬಿಸಿಸಿಐ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟೆಸ್ಟ್ ತಂಡದ ಕೋಚ್‌ಗಾಗಿ (Indian Test Team Head Coach) ಲಕ್ಷ್ಮಣ್ ಅವರನ್ನ ಸಂಪರ್ಕಿಸಿದೆ ಅನ್ನೋದೆಲ್ಲ ವದಂತಿ ಅಷ್ಟೇ. ನಾವು ಯಾರನ್ನೂ ಸಂಪರ್ಕಿಸಿಲ್ಲ, ಯಾರೊಂದಿಗೂ ಚರ್ಚಿಸಿಲ್ಲ. ಒಪ್ಪಂದದ ಪ್ರಕಾರ ಗಂಭೀರ್ ಕೋಚ್ ಆಗಿ ಮುಂದುವರಿಯುತ್ತಾರೆ ಅಂತ ಹೇಳಿದ್ದಾರೆ.

2024ರ ಜುಲೈನಲ್ಲಿ ಗಂಭೀರ್ ಟೀಂ ಇಂಡಿಯಾ ಮುಖ್ಯಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಭಾರತ ತಂಡ ಆಡಿದ 19 ಟೆಸ್ಟ್ ಪಂದ್ಯಗಳಲ್ಲಿ ಕೇವಲ 7ರಲ್ಲಿ ಗೆದ್ದಿದೆ. ಬಾಂಗ್ಲಾ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 1, ವೆಸ್ಟ್ ಇಂಡೀಸ್ ವಿರುದ್ಧ 2 ಮತ್ತು ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನ ಗೆದ್ದಿದೆ. ಆದ್ರೆ ಕಿವೀಸ್ ವಿರುದ್ಧ 3, ಆಸೀಸ್ ವಿರುದ್ಧ 3, ಇಂಗ್ಲೆಂಡ್ ವಿರುದ್ಧ 2 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ.

