ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಬಳಿಕ ಸೌರವ್ ಗಂಗೂಲಿ ಅವರು ಮೊದಲ ಬಾರಿಗೆ ಟೀಂ ಇಂಡಿಯಾ ಆಟಗಾರ, ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಡೇ-ನೈಟ್ ಪಂದ್ಯಕ್ಕೆ ಗಂಗೂಲಿ ಒಪ್ಪಿಗೆ ಸೂಚಿಸಿದ್ದು, ಸದ್ಯ ಟೀಂ ಇಂಡಿಯಾ ತಂಡಕ್ಕೆ ಸಂಬಂಧಿಸಿದ ಮಾರ್ಗಸೂಚಿ (ರೋಡ್ ಮ್ಯಾಪ್) ರಚನೆ ಮಾಡಲು ಗಂಗೂಲಿ, ದ್ರಾವಿಡ್‍ರನ್ನು ಭೇಟಿ ಮಾಡುತ್ತಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ ಬುಧವಾರ ಮಾಜಿ ನಾಯಕರಿಬ್ಬರು ಭೇಟಿಯಾಗಲಿದ್ದು, ಟೀಂ ಇಂಡಿಯಾ ಕ್ರಿಕೆಟ್ ಪರ ಸುದೀರ್ಘ ಅನುಭವ ಹೊಂದಿರುವ ಸ್ನೇಹಿತರ ಭೇಟಿ ವಿಶೇಷವಾಗಿದೆ. ಟೀಂ ಇಂಡಿಯಾ ರೋಡ್ ಮ್ಯಾಪ್ ರಚಿಸಲು ಗಂಗೂಲಿ ಅವರು ದ್ರಾವಿಡ್‍ರಿಂದ ಕೆಲ ಪ್ರಮುಖ ಸಲಹೆಗಳನ್ನು ಪಡೆಯಲಿದ್ದಾರೆ. ಈಗಾಗಲೇ ದ್ರಾವಿಡ್ ಎನ್‍ಸಿಎ ಮಾರ್ಗಸೂಚಿಗಳನ್ನು ರಚಿಸಿದ್ದಾರೆ. ಇದೇ ವೇಳೆ ಎನ್‍ಸಿಎ ಮುಖ್ಯಸ್ಥರಾದ ಬಳಿಕ ಸಂಸ್ಥೆಯಲ್ಲಿ ಕಂಡ ಬಂದಿರುವ ಲೋಪಗಳು ಹಾಗೂ ಮುಂದಿನ ಹಾದಿಯ ಕುರಿತು ದ್ರಾವಿಡ್‍ರಿಂದ ಗಂಗೂಲಿ ಮಾಹಿತಿ ಪಡೆಯಲಿದ್ದಾರೆ. ಈ ಸಭೆಗೆ ಎನ್‍ಸಿಎ ಸಿಇಒ ಆಗಿರುವ ತುಫಾನ್ ಘೋಷ್ ಕೂಡ ಹಾಜರಾಗಲಿದ್ದಾರೆ.
Advertisement
4 ವರ್ಷ ಟೀಂ ಇಂಡಿಯಾ-ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ದ್ರಾವಿಡ್, ಕಳೆದ ಜುಲೈನಲ್ಲಿ ಎನ್‍ಸಿಎ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಬಿಸಿಸಿಐ ಹೊಸದಾಗಿ ಸೃಷ್ಟಿ ಮಾಡಿದ್ದ ಮುಖ್ಯಸ್ಥರ ಪದವಿಗೆ ಹಲವರು ಪೈಪೋಟಿ ನಡೆಸಿದ್ದರು ಕೂಡ ಅಂತಿಮವಾಗಿ ದ್ರಾವಿಡ್ ನೇಮಕವಾಗಿದ್ದರು. ಯುವ ಆಟಗಾರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ದ್ರಾವಿಡ್ ಅವರೇ ಎನ್‍ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಹರು ಎಂದು ಬಿಸಿಸಿಐ ಈ ತೀರ್ಮಾನ ಕೈಗೊಂಡಿತ್ತು. ಅಂದಹಾಗೇ ಬಿಸಿಸಿಐನಲ್ಲಿ ಈ ಹಿಂದೆ ನಡೆದಿದ್ದ ಕೆಲ ತಾಂತ್ರಿಕ ಸಭೆಗಳಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ, ಕೋಚ್ ಆಗಿ ದ್ರಾವಿಡ್ ಒಟ್ಟಿಗೆ ಭಾಗಿಯಾಗಿದ್ದರು.