ಮುಂಬೈ: ಬಿಸಿಸಿಐ ಮುಂಬರುವ ವರ್ಷದಲ್ಲಿ ಏಕದಿನ ಸೂಪರ್ ಸೀರಿಸ್ ನಡೆಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ 4 ದೇಶಗಳ ನಡುವೆ ಸೂಪರ್ ಸೀರಿಸ್ ಕ್ರಿಕೆಟ್ ಟೂರ್ನಿಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಮೂಲಕ ಕ್ರಿಕೆಟ್ ಜಗತ್ತಿನ ‘ಬಿಗ್ ತ್ರೀ’ ಮಂಡಳಿಗಳು ಐಸಿಸಿ ವಿರುದ್ಧವೇ ತೊಡೆ ತಟ್ಟಲು ಮುಂದಾಗುತ್ತಿದೆ.
ಐಸಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಾರ್ಷಿಕ ಒಂದು ಸರಣಿಯನ್ನು ವಿಶ್ವಕಪ್ ಮಾದರಿಯಲ್ಲಿ ನಡೆಸಲು ಸಿದ್ಧತೆ ನಡೆಸಿತ್ತು. ಆ ಮೂಲಕ ವಾರ್ಷಿಕವಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಐಸಿಸಿ ಚಿಂತನೆ ನಡೆಸಿತ್ತು. ಆದರೆ ಬಿಸಿಸಿಐ ಈ ಪ್ರಸ್ತಾಪಕ್ಕೆ ವಿರೋಧವಾಗಿ 4 ದೇಶಗಳ ನಡುವೆ ಸೂಪರ್ ಸೀರಿಸ್ ನಡೆಸಲು ಮುಂದಾಗುತ್ತಿದೆ.
Advertisement
Advertisement
ಯಾಕೆ ಈ ಪ್ರಸ್ತಾಪ?
ಆದಾಯ ಹಂಚಿಕೆ ವಿಚಾರದಲ್ಲಿ ಬಿಸಿಸಿಐ ಮತ್ತು ಐಸಿಸಿ ನಡುವೆ ಕಿತ್ತಾಟಗಳು ನಡೆಯುತ್ತಿದ್ದು ಬಿಸಿಸಿಐ ಸೇರಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಐಸಿಸಿಗೆ ಹೆಚ್ಚು ಆದಾಯ ತಂದುಕೊಡುವ ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಐಸಿಸಿಯ ಆದಾಯದಲ್ಲಿ ತಮಗೆ ಹೆಚ್ಚಿನ ಪಾಲನ್ನು ನೀಡುವಂತೆ ಈ ಹಿಂದೆಯೇ ಈ ಮಂಡಳಿಗಳು ಪ್ರಸ್ತಾಪ ಮಾಡಿದ್ದವು. ಬಿಗ್ ತ್ರೀ ಕ್ರಿಕೆಟ್ ರಾಷ್ಟ್ರಗಳ ಈ ಬೇಡಿಕೆಯನ್ನು ನಿರಾಕರಿಸಿದ್ದ ಐಸಿಸಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಇತರೇ ರಾಷ್ಟ್ರಗಳಿಗೂ ಕೂಡ ಆರ್ಥಿಕವಾಗಿ ಬೆಂಬಲ ನೀಡಬೇಕಾದ ಕಾರಣ ಹೆಚ್ಚಿನ ಪಾಲನ್ನು ನೀಡಲಾಗುವುದಿಲ್ಲ ಎಂದಿತ್ತು.
Advertisement
ಐಸಿಸಿ ತನ್ನ ಹೆಚ್ಚಿನ ಆದಾಯವನ್ನು ಕ್ರಿಕೆಟ್ ಸರಣಿಯ ಟೆಲಿವಿಷನ್ ಪ್ರಸಾರ ಹಕ್ಕುಗಳ ಮಾರಾಟದ ಮೂಲಕ ಪಡೆಯುತ್ತದೆ. ಉದಾಹರಣೆ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಪ್ರಸಾರ ಹಕ್ಕುಗಳ ಮಾರಾಟದಿಂದ ಅತಿ ಹೆಚ್ಚು ಆದಾಯವನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಐಸಿಸಿ ಪ್ರತಿವರ್ಷ ವಿಶ್ವಕಪ್ ಮಾದರಿಯ ಟೂರ್ನಿಯನ್ನು ಆಯೋಜಿಸಲು ಸಿದ್ಧತೆ ನಡೆಸಿತ್ತು.
Advertisement
ಐಸಿಸಿಯ ಈ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಸಿಸಿಐ ಸದ್ಯ ಸೂಪರ್ ಸೀರಿಸ್ ಆಯೋಜನೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಈ ಟೂರ್ನಿಯಲ್ಲಿ ಆಡಲು ಇಂಗ್ಲೆಂಡ್ ಈಗಾಗಲೇ ಸಮ್ಮತಿ ಸೂಚಿಸಿದೆ. ಇತ್ತ ಆಸೀಸ್ ಕೂಡ ಒಲವು ತೋರಿದ್ದು, ಆ ಮೂಲಕ ‘ಬಿಗ್ ತ್ರೀ’ ಎಂದೇ ಖ್ಯಾತಿ ಪಡೆದಿರುವ ಈ ಮೂರು ಸಂಸ್ಥೆಗಳು ಐಸಿಸಿ ವಿರುದ್ಧವೇ ಒತ್ತಡವನ್ನು ಹಾಕುತ್ತಿವೆ.
ಐಸಿಸಿಯ ಈಗಿನ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಸಂಸ್ಥೆ ದ್ವಿಪಕ್ಷೀಯ ಟೂರ್ನಿಗಳನ್ನು ಆಯೋಜಿಸಲು ಮಾತ್ರ ಅನುಮತಿಯನ್ನು ಹೊಂದಿವೆ. ಈಗ ನಿಯಮಗಳ ಬದಲಾವಣೆಗೂ ಐಸಿಸಿ ಮೇಲೆ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ಐಸಿಸಿಯ ವಾರ್ಷಿಕ ಕ್ರಿಕೆಟ್ ಟೂರ್ನಿಯ ಪ್ಲಾನ್‍ಗೆ ಅಪಸ್ವರವೂ ಕೇಳಿ ಬಂದಿದ್ದು, ಐಸಿಸಿ ಇಂತಹ ಟೂರ್ನಿ ನಡೆಸುವುದರಿಂದ ಆಟಗಾರರ ಮೇಲಿನ ಒತ್ತಡ ಹೆಚ್ಚಾಗಲಿದೆ. ಅಲ್ಲದೇ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲು ಕೂಡ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕ್ರಿಕೆಟ್ ಮಂಡಳಿಗಳ ಅಭಿಪ್ರಾಯವಾಗಿದೆ. ಬಿಸಿಸಿಐ ಅಂದುಕೊಂಡಂತೆ ನಡೆದರೆ 2021 ರಲ್ಲಿ ಸೂಪರ್ ಸೀರಿಸ್ ನಡೆಯಲಿದ್ದು, ಭಾರತದಲ್ಲೇ ಮೊದಲ ಟೂರ್ನಿ ನಡೆಯಲಿದೆ.
ಬಿಸಿಸಿಐ, ಐಸಿಸಿ ತಿಕ್ಕಾಟ ಯಾಕೆ?
ಬಿಸಿಸಿಐ ಹಾಗೂ ಐಸಿಸಿ ನಡುವಿನ ತಿಕ್ಕಾಟ ಹಿಂದಿನಿಂದಲೇ ಜೋರಾಗಿದ್ದು, ಈ ಹಿಂದೆ ಆದಾಯದ ಹೆಚ್ಚುವರಿ ಪಾಲನ್ನು ನೀಡದಿದ್ದರೆ ಐಸಿಸಿ ಮಂಡಳಿಯಿಂದಲೇ ಹೊರ ಬರುವ ಎಚ್ಚರಿಕೆಯನ್ನು ನೀಡಿತ್ತು. ಈ ಸೂಪರ್ ಸೀರಿಸ್ ಹಿಂದಿನ ಪ್ರಮುಖ ವ್ಯಕ್ತಿ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಆಗಿದ್ದು, ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆಯಾಗಲು ಬೆಂಬಲವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಂಗೂಲಿ, ಶ್ರೀನಿವಾಸನ್ ಅವರ ಪ್ರಸ್ತಾಪವನ್ನು ಚಾಲ್ತಿಗೆ ತರಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಹಾಗೂ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿದೆ.
ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ಆರಂಭದಲ್ಲೇ ಐಸಿಸಿ ಆದಾಯ ಹಂಚಿಕೆ ವಿರುದ್ಧ ಅಪಸ್ವರ ಎತ್ತಿದ್ದರು. ಅಲ್ಲದೇ ಬಿಸಿಸಿಐಗೆ ಹೆಚ್ಚಿನ ಆದಾಯವನ್ನು ತರುವುದು ತಮ್ಮ ಪ್ರಮುಖ ಗುರಿ ಎಂದಿದ್ದರು. ಈ ಹಿಂದೆ ಅಧಿಕಾರದಲ್ಲಿದ್ದ ಶ್ರೀನಿವಾಸನ್ ಅವರು ಕೂಡ ಮಂಡಳಿಗೆ ಹೆಚ್ಚಿನ ಆರ್ಥಿಕತೆಯನ್ನು ತರುವ ನಿಟ್ಟಿನಲ್ಲಿ ಗಮನ ಹರಿಸಿದ್ದರು. ಬಿಸಿಸಿಐ ವಿಶ್ವ ಕ್ರಿಕೆಟ್‍ಗೆ ಸೇರುವ ಆದಾಯ ಶೇ.75 ರಿಂದ 80ರಷ್ಟನ್ನು ನೀಡುತ್ತಿದೆ.
ವಿಶೇಷ ಎಂದರೆ ಹಲವು ಕ್ರಿಕೆಟ್ ಸಂಸ್ಥೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸತತ 3 ವರ್ಷಗಳಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನಷ್ಟವನ್ನು ಎದುರಿಸುತ್ತಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಕಳೆದ ವರ್ಷ ಆರ್ಥಿಕ ಸಮಸ್ಯೆಗೆ ಸಿಲುಕಿ ಆಟಗಾರರ ವೇತನವನ್ನು ಪಾವತಿ ಮಾಡಲು ಸಮಸ್ಯೆ ಎದುರಿಸಿತ್ತು. ಐರ್ಲೆಂಡ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದ ಆಯೋಜನೆಯ ಅವಕಾಶವನ್ನು ಕೈ ಚೆಲ್ಲಿತ್ತು. ಉಳಿದಂತೆ ಪಾಕ್ ಕ್ರಿಕೆಟ್ ಮಂಡಳಿ ಕೂಡ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದು, ಅದರ ಭವಿಷ್ಯವೇ ಡೋಲಾಯಮಾನವಾಗಿದೆ.
ಬಿಸಿಸಿಐ ನಿರ್ಧಾರವೇಕೆ?
ಈಗಾಗಲೇ ಬಿಸಿಸಿಐ ಅಧ್ಯಕ್ಷರು ಮಂಡಳಿಗೆ ಆರ್ಥಿಕತೆಯನ್ನು ಹೆಚ್ಚಿಸುವತ್ತ ಗಮನ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸೀರೀಸ್ ಆಯೋಜಿಸಿದರೆ ಟೂರ್ನಿಯ ಪ್ರಸಾರ ಹಕ್ಕುಗಳು ಸಹಜವಾಗಿಯೇ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿ ಆದಾಯ ಹೆಚ್ಚಳವಾಗಲಿದೆ. ಅಲ್ಲದೇ ಸೂಪರ್ ಸೀರೀಸ್ ಟೂರ್ನಿ ನಡೆಯುವುದರಿಂದ ಐಸಿಸಿಯ ಮಿನಿ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಬಹುದಾಗಿದೆ.