Cricket

ಪದ್ಮಭೂಷಣ ಪ್ರಶಸ್ತಿಗೆ ಧೋನಿ ಹೆಸರು ಶಿಫಾರಸು

Published

on

Share this

ನವದೆಹಲಿ: ಭಾರತ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಎಂಎಸ್ ಧೋನಿ ಹೆಸರನ್ನು ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿಗೆ ಬಿಬಿಸಿಐ ಶಿಫಾರಸು ಮಾಡಿದೆ.

ಪ್ರಸ್ತುತ ವರ್ಷದ ಪದ್ಮಭೂಷಣ ಪ್ರಶಸ್ತಿಗೆ ಬಿಸಿಸಿಐನಿಂದ ಧೋನಿ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿದ್ದು, ಈ ನಿರ್ಧಾರವನ್ನು ಒಮ್ಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಧೋನಿ ನಾಯಕತ್ವದಲ್ಲಿ ಮಾತ್ರ ಎರಡು ವಿಶ್ವಕಪ್(2011ರ ವಿಶ್ವಕಪ್ ಮತ್ತು 2007ರ ಟಿ-20 ವಿಶ್ವಕಪ್)ಗಳನ್ನು ಗೆದ್ದುಕೊಂಡಿದೆ. ಅಷ್ಟೇ ಅಲ್ಲದೇ 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾರಣ ಧೋನಿ ಹೆಸರನ್ನು ಬಿಟ್ಟು ಬೇರೆ ಯಾರನ್ನು ಪ್ರಶಸ್ತಿಗಾಗಿ ಪ್ರಸ್ತಾಪಿಸಿಲ್ಲ ಎಂದು ಖನ್ನಾ ಹೇಳಿದರು.

302 ಏಕದಿನ ಪಂದ್ಯಗಳಲ್ಲಿ 9737 ರನ್‍ಗಳನ್ನು ಹೊಡೆದಿರುವ 36 ವರ್ಷದ ಧೋನಿ ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. 90 ಟೆಸ್ಟ್ ಪಂದ್ಯಗಳಲ್ಲಿ 4875 ರನ್, 78 ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1212 ರನ್‍ಗಳನ್ನು ಹೊಡೆದಿದ್ದಾರೆ. ಏಕದಿನದಲ್ಲಿ 6 ಶತಕ ಮತ್ತು 33 ಅರ್ಧಶತಕ ಹೊಡೆದಿರುವ ಧೋನಿ ಟೆಸ್ಟ್ ನಲ್ಲಿ 10 ಶತಕ, 77 ಅರ್ಧಶತಕ ಹೊಡೆದಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ 584 ಕ್ಯಾಚ್, 163 ಸ್ಟಂಪಿಂಗ್ ಮಾಡಿದ್ದಾರೆ.

ಈಗಾಗಲೇ ಭಾರತ ಸರ್ಕಾರ ನೀಡುವ ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿರುವ ಧೋನಿ ಅವರಿಗೆ ಈ ಬಾರಿ ಪದ್ಮಭೂಷಣ ಪ್ರಶಸ್ತಿ ಸಿಗುವುದು ಖಚಿತವಾಗಿದ್ದು, ಈ ಗೌರವಕ್ಕೆ ಪಾತ್ರರಾದ 11ನೇ ಕ್ರಿಕೆಟ್ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಈ ಹಿಂದೆ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸುನೀಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಚಂದು ಬೋರ್ಡೆ, ಪ್ರೊ .ಡಿಬಿ ದಿಯೋಧರ್, ಸಿಕೆ ನಾಯ್ಡು ಮತ್ತು ಲಾಲಾ ಅಮರ್‍ನಾಥ್ ಅಲ್ಲದೆ, ಭಾರತದ ಪರ 13 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಪಟಿಯಾಲ ರಾಜ ಭಾಲಿಂದ್ರ ಸಿಂಗ್ ಮತ್ತು 1936ರಲ್ಲಿ ಇಂಗ್ಲೆಂಡ್ ಪ್ರವಾಸದ ನಾಯಕತ್ವವನ್ನು ವಹಿಸಿದ್ದ ವಿಜಯನಗರಂ ಮಹಾರಾಜ ವಿಜಯ ಆನಂದ್ ಅವರಿಗೆ ಪ್ರಶಸ್ತಿ ಸಿಕ್ಕಿತ್ತು.

Click to comment

Leave a Reply

Your email address will not be published. Required fields are marked *

Advertisement
Advertisement