ಲಂಡನ್: 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗುವ ಸಾಧ್ಯತೆಯಿದೆ. ವಿಶ್ವ ಕ್ರಿಕೆಟ್ ಸಮಿತಿಯ ಅಧ್ಯಕ್ಷ, ಮಾಜಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಮೈಕ್ ಗ್ಯಾಟಿಂಗ್ ಈ ವಿಚಾರವನ್ನು ಮೊದಲ ಬಾರಿಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಮೇರಿಲೆಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ಸಮಿತಿಯಲ್ಲಿ ನಡೆದ ಸಭೆಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನು ಸಾಹ್ನಿ ಅವರು ಬಿಸಿಸಿಐ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ದಳ(ನಾಡಾ) ವ್ಯಾಪ್ತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಬೇಕೆಂಬ ಆಗ್ರಹಕ್ಕೆ ಬಲ ಬಂದಿದೆ ಎಂದು ಹೇಳಿದ್ದಾರೆ.
Advertisement
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೈಕ್ ಗ್ಯಾಟಿಂಗ್ ಅವರು, ನಾವು ಮನು ಸಾಹ್ನಿ ಅವರ ಜೊತೆ ಮಾತನಾಡಿದ್ದೇವೆ. ಅವರು 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಬಹುದು ಎನ್ನುವ ಬಲವಾದ ನಂಬಿಕೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದೆ. ಅವಕಾಶ ಸಿಕ್ಕರೆ ಕ್ರಿಕೆಟಿಗೆ ವಿಶ್ವ ಮಟ್ಟದಲ್ಲಿ ಬೋನಸ್ ಸಿಕ್ಕಿದಂತಾಗುತ್ತದೆ. ಒಲಿಂಪಿಕ್ಸ್ ಕ್ರೀಡಾಕೂಟ ತಿಂಗಳುಗಟ್ಟಲೇ ನಡೆಯುವುದಿಲ್ಲ. 2 ವಾರಗಳ ಕಾಲ ಮಾತ್ರ ನಡೆಯುತ್ತದೆ. ಅಷ್ಟೇ ಅಲ್ಲದೇ 4 ವರ್ಷಕ್ಕೊಮ್ಮೆ ನಡೆಯುತ್ತದೆ. ಒಮ್ಮೆ ಕ್ರೀಡಾಕೂಟದ ಅವಧಿ ಪ್ರಕಟಗೊಂಡರೆ ಎರಡು ವಾರಗಳ ಕಾಲ ಶೆಡ್ಯೂಲ್ ಮಾಡುವುದಕ್ಕೆ ಕ್ರಿಕೆಟ್ ತಂಡಗಳಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಮುಂದಿನ 18 ತಿಂಗಳು ಬಹಳ ಮುಖ್ಯವಾಗಿದ್ದು ಬಿಸಿಸಿಐ ನಾಡಾ ಜೊತೆ ಕೆಲಸ ಮಾಡುತ್ತಿದೆ. ಇದರಿಂದಾಗಿ ನಾವು ಒಲಿಂಪಿಕ್ಸ್ ಕ್ರೀಡೆಯಲ್ಲಿ ಕ್ರಿಕೆಟ್ ಸೇರಿಸುವ ದಾರಿ ಸುಗಮವಾಗಿದೆ. ಒಲಿಂಪಿಕ್ಸ್ ಕ್ರೀಡೆಯಲ್ಲಿ ಅವಕಾಶ ಸಿಕ್ಕರೆ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ತಂಡ ದೇಶವನ್ನು ಪ್ರತಿನಿಧಿಸಬಹುದು ಎಂದು ಮೈಕ್ ಗ್ಯಾಟಿಂಗ್ ತಿಳಿಸಿದರು.
Advertisement
ಐಸಿಸಿ ಹಿಂದಿನಿಂದಲೂ ಒಲಿಂಪಿಕ್ಸ್ ಕೂಟದಲ್ಲಿ ಕ್ರಿಕೆಟ್ ಆಟ ಸೇರಿಸಲು ಪ್ರಯತ್ನ ನಡೆಸುತಿತ್ತು. 2024ರಲ್ಲಿ ಕ್ರಿಕೆಟ್ ಸೇರಿಸಲೇಬೇಕೆಂಬ ನಿಟ್ಟಿನಲ್ಲಿ ಭಾರೀ ಪ್ರಯತ್ನ ನಡೆಸಿತ್ತು. ಆದರೆ ಐಸಿಸಿಯ ಆಸೆಗೆ ಬಿಸಿಸಿಐ ಸದಸ್ಯರು ಅಡ್ಡಗಾಲು ಹಾಕಿದ್ದರು. ಬಿಸಿಸಿಐ ಸರ್ಕಾರದ ಸಂಸ್ಥೆ ಅಲ್ಲ. ಹೀಗಾಗಿ ಭಾಗವಹಿಸುವುದಿಲ್ಲ ಎಂದು ವಾದಿಸುತಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಒಪ್ಪಿದರೆ ಎಲ್ಲ ರಾಷ್ಟ್ರಗಳು ಸಹ ಸುಲಭವಾಗಿ ಯಾವುದೇ ನಿರ್ಧಾರಕ್ಕೆ ಒಪ್ಪಿಗೆ ನೀಡುತ್ತವೆ.
1900ಕ್ಕೂ ಮೊದಲು ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡಿತ್ತು. 2028ರ ಒಲಿಂಪಿಕ್ಸ್ ಕ್ರೀಡಾಕೂಟ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿದೆ. 2020ರ ಒಲಿಂಪಿಕ್ಸ್ ಜಪಾನಿನ ಟೋಕಿಯೋದಲ್ಲಿ ನಡೆದರೆ 2024ರ ಕೂಟ ಫ್ರಾನ್ಸಿನ ಪ್ಯಾರಿಸ್ ನಲ್ಲಿ ನಡೆಯಲಿದೆ.
ಬಿಸಿಸಿಐ ನಾಡಾ ವ್ಯಾಪ್ತಿಗೆ ಬಂದಿದ್ದು ಹೇಗೆ?
ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿರುವ ಪೃಥ್ವಿ ಶಾ ಅವರ ಪ್ರಕರಣದಿಂದಾಗಿ ಬಿಸಿಸಿಐ ಕೊನೆಗೂ ನಾಡಾ ವ್ಯಾಪ್ತಿಗೆ ಬಂದಿದೆ. ಕೇಂದ್ರ ಕ್ರೀಡಾ ಸಚಿವಾಲಯ ನಾಡಾ ವ್ಯಾಪ್ತಿಗೆ ಬರುವಂತೆ ಬಿಸಿಸಿಐಗೆ ಹಲವು ಬಾರಿ ಪತ್ರ ಬರೆದಿತ್ತು. ಈ ಪತ್ರಕ್ಕೆ ಬಿಸಿಸಿಐ ನಾವು ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಬಯಸುವುದಿಲ್ಲ. ನಮ್ಮದು ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಅಲ್ಲ ಎಂದು ವಾದಿಸಿಕೊಂಡು ಬಂದಿತ್ತು.
ಉದ್ದೀಪನ ಪರೀಕ್ಷೆಯನ್ನು ಬಿಸಿಸಿಐ ಖಾಸಗಿ ಸಂಸ್ಥೆಯಿಂದ ಮಾಡಿಸಿಕೊಳ್ಳುತಿತ್ತು. ಯುವ ಆಟಗಾರ ಪೃಥ್ವಿ ಶಾ ಅವರ ಪರೀಕ್ಷೆ ಫೆಬ್ರವರಿಯಲ್ಲಿ ನಡೆದು ಬಳಿಕ ಐಪಿಎಲ್ ಪಂದ್ಯ ಆಡಲು ಅನುಮತಿ ನೀಡಿ ಈಗ 8 ತಿಂಗಳು ನಿಷೇಧ ಹೇರಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಆಟಗಾರರಿಗೆ ಔಷಧಿ ತೆಗೆದುಕೊಳ್ಳುವ ವಿಚಾರದಲ್ಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರಿಯಾದ ಮಾಹಿತಿಗಳನ್ನು ನೀಡಿದ್ದರೆ ಪೃಥ್ವಿ ಶಾ ಕೆಮ್ಮಿಗೆ ಟೆರ್ಬುಟಾಲಿನ್ ಅಂಶ ಇರುವ ಸಿರಾಪ್ ಸೇವಿಸುತ್ತಿರಲಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಪೃಥ್ವಿ ಶಾ ಅವರು, ತಂದೆಯ ಸಲಹೆಯಂತೆ ಹತ್ತಿರ ಮೆಡಿಕಲ್ ಅಂಗಡಿಗೆ ಹೋಗಿ ಸಿರಾಪ್ ತೆಗೆದುಕೊಂಡಿದ್ದೆ. ಉದ್ದೇಶಪೂರ್ವಕವಾಗಿ ನಾನು ಔಷಧಿಯನ್ನು ಸೇವನೆ ಮಾಡಿಲ್ಲ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.
ಇದಾದ ಬಳಿಕ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರಿಗೆ ಕೇಂದ್ರದ ಕ್ರೀಡಾ ಸಚಿವಾಲಯ ಪತ್ರ ಬರೆದಿತ್ತು. ಬಿಸಿಸಿಐಗೆ ಆಟಗಾರರ ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸಲು ಸರ್ಕಾರದ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆ ಅನುಮತಿ ಇಲ್ಲದ ಕಾರಣ ನಿಮಗೆ ಪರೀಕ್ಷೆ ನಡೆಸಲು ಅನುಮತಿ ಇಲ್ಲ ಎಂದು ಖಾರವಾಗಿ ತಿಳಿಸಿತ್ತು.
ಕ್ರೀಡೆಯಲ್ಲಿ ಪರೀಕ್ಷೆ ನಡೆಸಲು ಕಡ್ಡಾಯವಾಗಿ ಸ್ವಯತ್ತ ಸಂಸ್ಥೆಯಾದ ನಾಡಾ ದೊಂದಿಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿಲ್ಲ. ಹಲವು ವರ್ಷಗಳಿಂದ ಸರ್ಕಾರ ಒತ್ತಡ ಹಾಕುತ್ತಿದ್ದರು ಬಿಸಿಸಿಐ ಇದಕ್ಕೆ ಮುಂದಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಬಿಸಿಸಿಐ ಅತಿಯಾದ ಪಾಲ್ಗೊಳ್ಳುವಿಕೆನ್ನು ಕೇಂದ್ರ ಕ್ರೀಡಾ ಸಚಿವಾಲಯ ಪ್ರಶ್ನಿಸಿತ್ತು. ನಾಡಾ ಅಂಗೀರಿಸಿದ ನಿಯಮಗಳ ಪ್ರಕಾರ ಬೇರೆ ಸಂಸ್ಥೆಗಳಿಂದ ಉದ್ದೀಪನ ಮದ್ದು ಪರೀಕ್ಷೆ ನಡೆಸುವಂತಿಲ್ಲ. ಆದರೆ ಬಿಸಿಸಿಐ ಕೆಲ ನಿಯಮಗಳನ್ನು ತೋರಿಸಿ ಸ್ವತಃ ವಿಚಾರಣೆ ನೇಮಿಸುತ್ತಿದೆ. ಇದು ನೈಸರ್ಗಿಕ ನ್ಯಾಯ ತತ್ವಗಳಿಗೆ ಅನುಗುಣವಾಗಿಲ್ಲ ಎಂದು ಕ್ರೀಡಾ ಸಚಿವಾಲಯ ತನ್ನ ಪತ್ರದಲ್ಲಿ ಖಾರವಾಗಿ ತಿಳಿಸಿತ್ತು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಬಿಗಿ ನಿಲುವು ತೋರಿಸುತ್ತಿದ್ದಂತೆ ಆಗಸ್ಟ್ 9 ರಂದು ಬಿಸಿಸಿಐ ನಾಡಾ ವ್ಯಾಪ್ತಿಗೆ ಬರಲು ಒಪ್ಪಿಗೆ ಸೂಚಿಸಿತ್ತು.
ಬಿಸಿಸಿಐ ಇಲ್ಲಿಯವರಗೆ ಖಾಸಗಿ ಸಂಸ್ಥೆಯ ಮೂಲಕ ಉದ್ದೀಪನ ಮದ್ದು ಪರೀಕ್ಷೆಗಳನ್ನು ನಡೆಸುತಿತ್ತು. ಆ ಬಳಿಕ ಆಟಗಾರರ ವರದಿಯನ್ನು ಐಸಿಸಿ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆಗೆ ಕಳುಹಿಸುತ್ತದೆ. ಸದ್ಯ ಭಾರತದ ಸಂಸ್ಥೆಯಾಗಿರುವ ನಾಡಾದ ಅಡಿಯಲ್ಲೇ ಉದ್ದೀಪನ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗೆ ಸಹಿ ಹಾಕಿದೆ. ಅಕ್ಟೋಬರ್ ನಿಂದ ಕ್ರಿಕೆಟ್ ಆಟಗಾರರ ಉದ್ದೀಪನ ಪರೀಕ್ಷೆಗಳನ್ನು ನಾಡಾ ಸಂಸ್ಥೆ ನಿರ್ವಹಿಸಲಿದೆ ಎಂಬ ಮಾಹಿತಿ ಇದೆ.