ಮಹಿಳಾ ಕ್ರಿಕೆಟ್‍ನಲ್ಲೂ ಫಿಕ್ಸಿಂಗ್ ಭೂತ – ಬೆಂಗ್ಳೂರಿನಲ್ಲಿ ದೂರು ದಾಖಲು

Public TV
1 Min Read
666853 bcci logo afp e1565683123264

ಬೆಂಗಳೂರು: ಪುರುಷರ ಕ್ರಿಕೆಟ್‍ನಲ್ಲಿ ಕೇಳಿ ಬರುತ್ತಿದ್ದ ಮ್ಯಾಚ್ ಫಿಕ್ಸಿಂಗ್ ಭೂತ ಮೊದಲ ಬಾರಿ ಎಂಬಂತೆ ಮಹಿಳಾ ಕ್ರಿಕೆಟ್‍ನಲ್ಲೂ ಕೇಳಿ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಸಂಪರ್ಕ ಮಾಡಿದ ಆರೋಪ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ (ಎಸಿಯು) ವಿಚಾರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಮ್ಯಾಚ್ ಫಿಕ್ಸಿಂಗ್ ಮಾಡುವ ಉದ್ದೇಶದಿಂದ ಬುಕ್ಕಿಯೊಬ್ಬ ಸಂಪರ್ಕ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ತಮ್ಮನ್ನು ಬುಕ್ಕಿ ಸಂಪರ್ಕ ಮಾಡಿದ್ದ ಬಗ್ಗೆ ಮಹಿಳಾ ಕ್ರಿಕೆಟ್ ಆಟಗಾರ್ತಿಯೇ ಬಿಸಿಸಿಐಗೆ ಮಾಹಿತಿ ನೀಡಿದ್ದಾಗಿ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

police 1 1

ಈ ಸಂಬಂಧ ಜಿತೇಂದ್ರ ಕೊಠಾರಿ ಹಾಗೂ ರಾಕೇಶ್ ಬಫ್ನಾ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಬಫ್ನಾ ವರ್ಷದ ಆರಂಭದಲ್ಲಿ ಆಟಗಾರ್ತಿಯನ್ನು ಭೇಟಿಯಾಗಿದ್ದು, ತಮ್ಮೊಂದಿಗೆ ಕೈಜೋಡಿಸಿದರೆ ದೊಡ್ಡ ಪ್ರಮಾಣದಲ್ಲಿ ಹಣ ನೀಡುವುದಾಗಿ ಆಫರ್ ನೀಡಿದ್ದ ಎನ್ನುವ ವಿಚಾರ ದೂರಿನಲ್ಲಿ ಉಲ್ಲೇಖವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾಗವಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣ ಮೂಲಕ ತಮ್ಮನ್ನು ಕ್ರೀಡಾ ಸಂಸ್ಥೆಯೊಂದರ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದ ಕೊಠಾರಿ, ಆಟಗಾರ್ತಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಮೊದಲು ಪ್ರಯತ್ನಿಸಿದ್ದು, ಆ ಬಳಿಕ ರಾಕೇಶ್ ಬಫ್ನಾನನ್ನು ಪರಿಚಯ ಮಾಡಿಸಿದ್ದ. ಬಫ್ನಾ ಆಟಗಾರ್ತಿಯ ಎದುರು ಮೊದಲು ಫಿಕ್ಸಿಂಗ್ ಕುರಿತು ಮಾತನಾಡಿದ್ದು, ಹಣ ನೀಡುವುದಾಗಿ ಹೇಳಿದ್ದ ಎಂಬ ಮಾಹಿತಿ ಲಭಿಸಿದೆ. ಆದರೆ ಫಿಕ್ಸಿಂಗ್ ಆಫರ್ ಪಡೆದಿದ್ದ ಮಹಿಳಾ ಆಟಗಾರ್ತಿಯ ಹೆಸರನ್ನು ರಿವೀಲ್ ಮಾಡಿಲ್ಲ.

Share This Article