ರಾಯಚೂರು: ಕೃಷಿ ಕ್ಷೇತ್ರದ ಸಂಶೋಧನೆಗಳು ರೈತರ ಜಮೀನುಗಳಿಗೆ ತಲುಪಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದ ಕೃಷಿ ವಿಜ್ಞಾನಗಳ ವಿವಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳ ವಾಣಿಜ್ಜೀಕರಣ ಕುರಿತ ಸಂವಾದ ಸಭೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಆನ್‍ಲೈನ್ ಮೂಲಕ ಚಾಲನೆ ನೀಡಿದರು. ವಿವಿಯ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ವರ್ಚುವಲ್ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿನ ಹೊಸ ಸಂಶೋಧನೆ ಮತ್ತು ತಂತ್ರಜ್ಞಾನಗಳು ಕೇವಲ ವಿವಿಗಳ ಪ್ರಯೋಗಾಲಯಕ್ಕೆ ಸಿಮೀತವಾಗಿರದೆ ರೈತರ ಜಮೀನುಗಳಿಗೆ ತಲುಪಿದಾಗ ಮಾತ್ರ ಸಂಶೋಧನೆಗೆ ಅರ್ಥ ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದೇ ನಮ್ಮ ಗುರಿ: ಅರುಣ್ ಸಿಂಗ್
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಹೆಚ್ಚಿನ ಆಸಕ್ತಿವಹಿಸಿ ಕೃಷಿ ಸಂಶೋಧನೆಗಳ ವಾಣಿಜ್ಜೀಕರಣ ಕಾರ್ಯಕ್ಕೆ ಮುಂದಾಗಿರುವುದು ರಾಜ್ಯದಲ್ಲಿ ಮೈಲುಗಲ್ಲಾಗಿದೆ. ರೈತರಿಗೆ ವರದಾನವಾಗಲಿದ್ದು, ಎಲ್ಲಾ ಕೃಷಿ ವಿವಿಗಳು ತಮ್ಮ ಸಂಶೋಧನೆಗಳನ್ನು ವಾಣಿಜ್ಜೀಕರಣಗೊಳಿಸಲು ಮುಂದಾಗಬೇಕು. ವಿವಿಗಳು ಆಧುನಿಕ ಕೃಷಿಯನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗೆ ಮುಂದಾಗಬೇಕು. ರೈತ ಸ್ನೇಹಿಯಾಗಿರುವ ಸಂಶೋಧನೆಗಳು ನಡೆಯಬೇಕಾಗಿದೆ ಎಂದರು. ಇದನ್ನೂ ಓದಿ: ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ- ಶಿಸ್ತು ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ
ಈ ನಿಟ್ಟಿನಲ್ಲಿ ಸರ್ಕಾರ ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ 770 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ರಾಯಚೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಯಿಂದ 3 ವರ್ಷ ರೈತರಿಗೆ ತಂತ್ರಜ್ಞಾನ ಕಲಿಸಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ವಿವಿ ಕುಲಸಚಿವ ಡಾ.ಎಂ.ಬಿ.ಪಾಟೀಲ್, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಮತ್ತಿತರರು ಭಾಗವಹಿಸಿದ್ದರು.