ಬೆಂಗಳೂರು: ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ವಿಭಾಗದಲ್ಲಿ ಸೇರ್ಪಡೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೈತಿಕ ಶಿಕ್ಷಣದ ಬಗ್ಗೆ ಪಠ್ಯದಲ್ಲಿ ಸೇರಿಸುವ ಬೇಡಿಕೆಗಳು ಬಂದಿದೆ. ಹೀಗಾಗಿ ಪಂಚತಂತ್ರ, ರಾಮಾಯಣ, ಮಹಾಭಾರತ ಸೇರಿದಂತೆ ಮಾರಲ್ ಸೈನ್ಸ್ ಅಂಶಗಳನ್ನು ಸೇರಿಸುತ್ತೇವೆ. ಇದರ ಜೊತೆಗೆ ಈ ವರ್ಷದಿಂದಲೇ ಭಗವದ್ಗೀತೆ ಸಹ ಸೇರ್ಪಡೆ ಆಗುತ್ತದೆ. ಆದರೆ ಪರೀಕ್ಷೆಗೆ ಈ ವಿಷಯ ಇರುವುದಿಲ್ಲ. ಇದು ನೈತಿಕ ಶಿಕ್ಷಣದ ಭಾಗವಾಗಿಯಷ್ಟೇ ಇರಲಿವೆ ಎಂದರು.
Advertisement
Advertisement
2022-23ನೇ ಸಾಲಿನಿಂದಲೇ ನೈತಿಕ ಶಿಕ್ಷಣದ ವಿಭಾಗದಲ್ಲಿ ಭಗವದ್ಗೀತೆ ಸೇರ್ಪಡೆಗೆ ಸರ್ಕಾರದಿಂದ ನಿರ್ಧರಿಸಲಾಗಿದೆ. ಮಕ್ಕಳ ನೈತಿಕ ಶಿಕ್ಷಣದ ಭಾಗವಾಗಿ ಇರುತ್ತದೆ. ಆ ಧರ್ಮ, ಈ ಧರ್ಮ ಎಂದು ವಿಭಾಗ ಮಾಡೊಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ
Advertisement
ಹಿಜಬ್ ಧರಿಸಿ ಪರೀಕ್ಷೆಗೆ ಬರುವಂತಿಲ್ಲ: ಏಪ್ರಿಲ್ 22ರಿಂದ ಪ್ರಾರಂಭವಾಗುವ ಪಿಯುಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಡಿಸಿ, ಎಸ್ಪಿಗಳ ಜೊತೆ ಸಭೆ ನಡೆಸಲಾಗಿದೆ. ಆದರೆ ಪರೀಕ್ಷೆಗೆ ಹಿಜಬ್ ನಿಷೇಧಿಸಲಾಗಿದೆ. ಸಮವಸ್ತ್ರದಲ್ಲೇ ಪರೀಕ್ಷೆಗೆ ಬರಬೇಕು. ಧಾರ್ಮಿಕ ಭಾವನೆಯ ಸಮವಸ್ತ್ರ ಧರಿಸಲು ಅವಕಾಶ ಇಲ್ಲ. ಶಾಲಾ ಆಡಳಿತ ಮಂಡಳಿ ನೀಡಿರುವ ಸಮವಸ್ತ್ರ ಹಾಕಿಕೊಂಡು ಬರಬೇಕು. ಈವರೆಗೆ ಹಿಜಬ್ ಧರಿಸುತ್ತೇವೆ ಎಂದು ಯಾರೂ ಮನವಿ ಮಾಡಿಲ್ಲ ಎಂದು ತಿಳಿಸಿದರು.
Advertisement
ಪರೀಕ್ಷಾ ಕೇಂದ್ರದಲ್ಲಿ ಉಪನ್ಯಾಸಕರು ಹಿಜಬ್ ಹಾಕಬಾರದು. ಉಪನ್ಯಾಸಕರು ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಇದೊಂದು ಸೂಕ್ಷ್ಮ ವಿಚಾರವಾಗಿದೆ ಎಂದ ಅವರು, ವಿದ್ಯಾರ್ಥಿಗಳು ಪರಿಕ್ಷೆಯನ್ನು ಕೂಲ್ ಆಗಿ ತಗೊಂಡು, ಆರಾಮವಾಗಿ ಬರೆಯಬೇಕು. ಪೂರ್ವ ಸಿದ್ಧತೆ, ಮಾಡೆಲ್ ಪ್ರಶ್ನೆ ಪತ್ರಿಕೆ ಇದ್ದ ರೀತಿಯೇ ಇರುತ್ತದೆ. ಎಸ್‍ಎಸ್‍ಎಲ್ಸಿ ಪರೀಕ್ಷೆ ಮಾದರಿಯಲ್ಲಿ ಮಕ್ಕಳ ಸ್ನೇಹಿ ಪರೀಕ್ಷೆ ಇರುತ್ತದೆ. ಪೋಷಕರು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಏಪ್ರಿಲ್ 22 ರಿಂದ ಮೇ 18ವರೆಗೆ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಲೀಕ್ ಆಗಿಲ್ಲ: ಎಸ್‍ಎಸ್‍ಎಲ್‍ಸಿ ಯಾವುದೇ ಪೇಪರ್ ಲೀಕ್ ಆಗಿಲ್ಲ. ಈ ಬಗ್ಗೆ ತನಿಖೆ ಮಾಡಿದ್ದೇವೆ. ಪರೀಕ್ಷೆ ಶುರುವಾದ 2 ಗಂಟೆ ನಂತರ ಮೊಬೈಲ್‍ನಲ್ಲಿ ಪ್ರಶ್ನೆ ಪತ್ರಿಕೆ ತೆಗೆದು ಹಾಕಿದ್ದಾರೆ ಎಂದರು.
ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ರಿಪೀಟರ್ಸ್ ಹೆಚ್ಚು ಗೈರು ಆಗಿದ್ದಾರೆ. ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಗೈರು ಆಗಿಲ್ಲ. ಮೇ 2ನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಮಾಡುತ್ತೇವೆ. ದಿನಾಂಕ ಶೀಘ್ರವೇ ಘೋಷಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ
ಆಧಾರವಿಲ್ಲದ ವಿಷಯಕ್ಕೆ ಕತ್ತರಿ: ಶಾಸಕ ಅಪ್ಪಚ್ಚು ರಂಜನ್ ಟಿಪ್ಪುವಿನ ಪಠ್ಯ ತೆಗೆಯಬೇಕು ಎಂದು ಮನವಿ ಮಾಡಿದ್ದರು. ತೆಗೆಯಲಿಲ್ಲ ಅಂದರೆ ಟಿಪ್ಪುವಿನ ಎಲ್ಲಾ ಮುಖ ತೋರಿಸಿ ಎಂದು ಹೇಳಿದ್ದಾರೆ. ಹೀಗಾಗಿ ಟಿಪ್ಪು ಕುರಿತಾತ ಕೆಲವು ಅಂಶಗಳನ್ನು ತೆಗೆಯಲಾಗಿದೆ. ಟಿಪ್ಪುವಿನ ಬಗ್ಗೆ ಯಾವುದಕ್ಕೆ ಆಧಾರವಿಲ್ಲವೋ ಆ ವಿಷಯವನ್ನು ಮಾತ್ರ ಪಠ್ಯದಲ್ಲಿ ತೆಗೆಯಲಾಗಿದೆ. ಮೈಸೂರು ಹುಲಿ ಅನ್ನೋದನ್ನ ತೆಗೆದಿಲ್ಲ. ಯಾವ ಅಂಶ ತೆಗೆಯಲಾಗಿದೆ ಅಂತ ಮುಂದಿನ ವಾರ ಸುದ್ದಿಗೋಷ್ಠಿ ಮಾಡಿ ಹೇಳುತ್ತೇನೆ ಎಂದು ತಿಳಿಸಿದರು.