ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಒಂದು ಕಾಲುವೆ ತೆಗೆಯಲಾಗಿದೆ. ಈ ಕಾಲುವೆಯನ್ನು ನೋಡಿದ ತಕ್ಷಣ ಇಲ್ಲಿ ಕಾವೇರಿ ನೀರು ಬರುತ್ತಾ ಎಂದು ಪ್ರಶ್ನೆಹುಟ್ಟುತ್ತದೆ. ಆದರೆ ಖಂಡಿತ ಇದು ನೀರು ಹರಿಸೋ ಕಾಲುವೆಯಲ್ಲ ಬದಲಿಗೆ ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ.
ಹೌದು. ಈ ಕಾಲುವೆ ನೋಡಿ ಯಾವುದೋ ಕಾವೇರಿ ನದಿಯನ್ನ ಬೆಂಗಳೂರಿಗೆ ಹರಿಸೋಕೆ ಅಗೆದಿದ್ದಾರೆ ಅಂತ ಜನರು ಅಂದುಕೊಳ್ಳುತ್ತಾರೆ. ಆದರೆ ಇದು ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ. ಬೇಕಾಬಿಟ್ಟಿ ಮಣ್ಣನ್ನು ಅಗೆದು ಕಂಠೀರವ ಕ್ರೀಡಾಂಗಣದಿಂದ ಬಿಬಿಎಂಪಿಗೆ ಹೋಗೋ ಮುಖ್ಯ ರಸ್ತೆಯಲ್ಲಿ ಅವಾಂತರ ಸೃಷ್ಟಿಸಿಟ್ಟಿದ್ದಾರೆ. ಅವೈಜ್ಞಾನಿಕವಾಗಿ ಪೈಪ್ ಅಳವಡಿಕೆ ಮಾಡಲು, ಜೆಸಿಬಿ ಮೂಲಕ ಮಣ್ಣನ್ನು ಅಗೆಸಿ ಕಾಲುವೆಯನ್ನಾಗಿಸಿದ್ದಾರೆ. ಕೆಲಸ ಮುಗಿದ ಬಳಿಕ ಸೋಲಾರ್, ವಿದ್ಯುತ್ ಪೋಲ್‍ಗಳನ್ನು ತೆರವುಗೊಳಿಸದೇ ಕಸ ಬಿಸಾಡುವ ರೀತಿ ಅದನ್ನು ಹಾಗೆಯೇ ಬಿಟ್ಟು ಬಿಬಿಎಂಪಿ ಬೇಜವಾಬ್ದಾರಿ ಮೆರೆದಿದೆ.
ಇತ್ತ ಬೆಂಗಳೂರಿನಲ್ಲಿ ಮಳೆಗಾಲದಂತೆ ಬೇಸಿಗೆಯಲ್ಲೂ ಮರಗಳು ದರೆಗೆ ಉರುಳುತ್ತಿವೆ. ಈ ರೀತಿ ಅವೈಜ್ಞಾನಿಕವಾಗಿ ಗುಂಡಿ ತೆಗೆದಿರುವುದರಿಂದ ಬೇರುಗಳು ಮರದ ಜೊತೆಗಿನ ಸಂಬಂಧವನ್ನೇ ಕಳೆದುಕೊಳ್ಳುತ್ತಿವೆ. ಹೀಗಾಗಿ ಮರ ಧರೆಗುರುಳುತ್ತಿವೆ ಎಂದು ವೃಕ್ಷ ತಜ್ಞರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್ ಅವರು, ಸಂಬಂಧಪಟ್ಟ ಅಧಿಕಾರಿಯ ಜೊತೆ ಈ ಬಗ್ಗೆ ಮಾತನಾಡಿ ಸರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ಪೈಪ್‍ಲೈನ್ ಹಾಕಲು ಬೇಕಾಬಿಟ್ಟಿ ಮಣ್ಣು ಅಗೆದು ಗುಂಡಿಗಳನ್ನು ಕಾಲುವೆ ರೀತಿ ತೆಗೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.