– ಪೇಜಾವರ ಶ್ರೀಗಳ ಶೋಕಾಚರಣೆ ನೆಪ
ಬೆಂಗಳೂರು: ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಇಂದು ಸಹ ಮುಂದೂಡಿಕೆಯಾಗಿದೆ. ಆದರೆ ಚುನಾವಣೆ ಮುಂದೂಡಿಕೆಗೆ ಪೇಜಾವರ ಶ್ರೀಗಳ ಶೋಕಾಚರಣೆಯನ್ನೇ ಪಾಲಿಕೆ ಆಡಳಿತ ಪಕ್ಷ ನೆಪ ಮಾಡಿಕೊಂಡಿದೆ.
ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಯಾವ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಇರುವ ಹಿನ್ನೆಲೆ ಚುನಾವಣೆಯಲ್ಲಿ ಭಾಗವಹಿಸಿ ಸಂಭ್ರಮಿಸುವುದು ಯೋಗ್ಯವಲ್ಲ. ಹೀಗಾಗಿ ಸ್ವಇಚ್ಛೆಯಿಂದ ಪಾಲಿಕೆ ಸದಸ್ಯರೇ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿದರು.
Advertisement
Advertisement
ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಕಾರ್ಪೋರೆಟರ್‍ಗಳು ಕೂಡ ಪಾಲಿಕೆಯತ್ತ ಮುಖ ಮಾಡಲಿಲ್ಲ. ಚುನಾವಣೆ ಪ್ರಕ್ರಿಯೆಯನ್ನು ನಡೆಸುವುದಕ್ಕೆ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಾಮಪತ್ರ ಸಲ್ಲಿಕೆಗೆ ಬೆಳಗ್ಗೆ 8 ಘಂಟೆಯಿಂದ 9:30ವರೆಗೂ ಅವಕಾಶವಿತ್ತು. ಆದರೆ ಯಾರೊಬ್ಬರು ನಾಮಪತ್ರ ಸಲ್ಲಿಕೆ ಮಾಡಲಿಲ್ಲ. ಹೀಗಾಗಿ ಚುನಾವಣೆಯನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ.
Advertisement
ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾವು ಚುನಾವಣೆಗೆ ಸಿದ್ಧವಾಗಿದ್ದೆವು. ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ, ಒಳಜಗಳ ಇತ್ತು. ಹಾಗಾಗಿ ಚುನಾವಣೆ ಮುಂದೂಡಿಕೆ ಮಾಡಿದ್ದಾರೆ. ಎಲ್ಲ ಸದಸ್ಯರು ಬಾರದ ಕಾರಣ ಚುನಾವಣೆ ಮುಂದೂಡುಕೆಯಾಗುತ್ತಿದೆ. ಇದು ಆಡಳಿತ ಪಕ್ಷದ ವೈಫಲ್ಯ. ಜನರ ತೆರಿಗೆ ಹಣ ಆರೇಳು ಲಕ್ಷ ರೂ. ವ್ಯರ್ಥವಾಗಿದೆ. ಇದರ ಹೊಣೆ ಸರ್ಕಾರ ಹೊರಬೇಕು. ಎಲ್ಲ ಸ್ಥಾಯಿ ಸಮಿತಿಗಳ ಸಾಕಷ್ಟು ಯೋಜನೆಗಳು, ಕಡತಗಳು ಹಾಗೇ ಬಾಕಿ ಉಳಿದಿವೆ ಎಂದರು.
Advertisement
ಆಡಳಿತ ಪಕ್ಷದ ಆಂತರಿಕ ಕಿತ್ತಾಟದಿಂದ ಚುನಾವಣೆಗೆ ಯಾವುದೇ ಸದಸ್ಯರು ಭಾಗವಹಿಸಲಿಲ್ಲ. ಇನ್ನೊಂದೆಡೆ ಕಾಂಗ್ರೆಸ್- ಜೆಡಿಎಸ್‍ನ ಉಚ್ಛಾಟಿತ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಿಲ್ಲ. ಇಂದು ಚುನಾವಣೆ ನಿಗದಿಯಾಗಿದ್ದರೂ ಸಮಿತಿ ಸದಸ್ಯರನ್ನು ಬಿಜೆಪಿ ಆಯ್ಕೆ ಮಾಡಿಲ್ಲ. ಸಮಿತಿ ಸದಸ್ಯರುಗಳ ಆಯ್ಕೆ ಮಾಡದ ಕಾರಣ ಪದೇಪದೇ ಚುನಾವಣೆ ಮುಂದೂಡಲಾಗುತ್ತಿದೆ. ಪಾಲಿಕೆಗೆ ಈ ಬಾರಿಯೂ ಅಂದಾಜು 5 ಲಕ್ಷ ರೂ. ನಷ್ಟವಾಗಿದೆ. ಪದೇಪದೇ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದಕ್ಕೆ ವಿರೋಧ ಕೇಳಿ ಬಂದಿದೆ.