ಬೆಂಗಳೂರು: ಸಮೀಕ್ಷೆಯನ್ನೇ ಮಾಡದೇ ಬಿಬಿಎಂಪಿ (BBMP) ಸಿಬ್ಬಂದಿ ಜಾತಿಗಣತಿ ಸಮೀಕ್ಷೆ (Caste Census) ಪೂರ್ಣ ಎಂಬ ಸ್ಟಿಕ್ಕರ್‌ನ್ನು ಮನೆಗೆ ಅಂಟಿಸುತ್ತಿದ್ದಾರೆ. ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕರೊಬ್ಬರ ಮೇಲೆ ಹಲ್ಲೆಯನ್ನು ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದ 7ನೇ ಕ್ರಾಸ್‍ನಲ್ಲಿರುವ ನಂದೀಶ್ ಎಂಬವರ ಮನೆಗೆ ಬಿಬಿಎಂಪಿ ಸಿಬ್ಬಂದಿ ಜಾತಿ ಗಣತಿ ಪೂರ್ಣಗೊಂಡಿದೆ ಎಂಬ ಸ್ಟಿಕ್ಕರ್ ಅಂಟಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮನೆ ಮಾಲೀಕ ಆರೋಪಿಸಿದ್ದಾರೆ. ಇದನ್ನೂ ಓದಿ: UP | ರಾಂಗ್ ರೂಟ್‌ಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಟ್ರಕ್ – ತಂದೆ, 4 ಮಕ್ಕಳು ಸೇರಿ ಐವರು ದುರ್ಮರಣ
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕನ ಮಗ ಶಶಾಂಕ್, ನಾವು ಎಲ್ಲರೂ ಮನೆ ಒಳಗಡೆ ಇದ್ದೆವು. ಆಗ ಪೌರಕಾರ್ಮಿಕರು ಮನೆಗೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇದನ್ನು ನಮ್ಮ ತಂದೆ ಪ್ರಶ್ನಿಸಿದ್ದಾರೆ. ಸರ್ವೇ ಮಾಡಿಲ್ಲ, ದಾಖಲೆ ಎಲ್ಲಿ ಅಂತ ಕೇಳಿದೆವು. ಇದಕ್ಕೆ ಸಿಬ್ಬಂದಿ, ಇದು ನನಗೆ ಕೊಟ್ಟಿರೋ ಟಾಸ್ಕ್ ಎಂದಿದ್ದಾರೆ. 1 ಗಂಟೆ ಬಳಿಕ ಮೇಲ್ವಿಚಾರಕರ ಜೊತೆ ಬಂದು, ಅಪ್ಪನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ ಕಾಲಿನಿಂದ ಒದ್ದು, ಕೆನ್ನೆಗೆ ಹೊಡೆದಿದ್ದಾರೆ. ಐಡಿ ಕಾರ್ಡ್ ಸಹ ಅವರು ತಂದಿರಲಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಸ್ಟೇಷನ್‍ಗೆ ಅಮ್ಮ, ನಾನು, ತಂದೆ ದೂರು ಕೊಡಲು ಹೋಗಿದ್ದೆವು. ಈ ವೇಳೆ, ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಇದರಿಂದ ದೂರು ಕೊಡದೇ ವಾಪಸ್ ಆಗಿದ್ದೆವು ಎಂದು ತಿಳಿಸಿದ್ದಾರೆ.
ಇದೆಲ್ಲದರ ನಡುವೆ ಮನೆಯ ಸದಸ್ಯರನ್ನು ಮಾತನಾಡಿಸದೇ ಕಾಟಾಚಾರಕ್ಕೆ ಕಂಡ ಕಂಡ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಹೋಗ್ತಿದ್ದಾರೆ. ವಿಪರ್ಯಾಸವೆಂದರೆ ಈ ಸಮೀಕ್ಷೆಗೆ ಪೌರಕಾರ್ಮಿಕರು, ಜಲಮಂಡಳಿಯ ಸಿಬ್ಬಂದಿಗಳನ್ನೂ ಬಳಸಿಕೊಳ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಬೈಕ್ ಅಪಘಾತ – ವಚನಾನಂದ ಶ್ರೀ ಸಹೋದರ ಸಾವು