ಬೆಂಗಳೂರು: ಒಂದು ತಿಂಗಳ ಹಿಂದೆಯೇ ನಗರದಲ್ಲಿ ಆರಂಭವಾಗಬೇಕಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸದ್ಯದಲ್ಲೇ ಚಾಲನೆ ಸಿಗಲಿದ್ದು ಮತ್ತೆ ಜೆಸಿಬಿ ಸದ್ದು ಮಾಡಲಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ಸಂಪತ್ ರಾಜ್, ಬಹುತೇಕ ಮುಂದಿನ ವಾರದಿಂದ ಒತ್ತುವರಿ ತೆರವು ಆರಂಭ ಸಾಧ್ಯತೆಗಳಿದ್ದು, ಅದರ ಸಂಪೂರ್ಣ ಸರ್ವೆಯ ವರದಿ ಮೂರು ದಿನಗಳಲ್ಲಿ ಕೈಸೇರಲಿದೆ. ವರದಿ ಕೈಸೇರಿದ ಬಳಿಕ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಜೊತೆ ಅಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ಕಾರ್ಯಾಚರಣೆಗೆ ದಿನಾಂಕ ಗೊತ್ತು ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ದೋಸ್ತಿ ಸರ್ಕಾರ ರಚನೆಯಾಗುತ್ತಿದ್ದ ಹಾಗೆ ಕಾರ್ಯಾಚರಣೆ ಬಗ್ಗೆ ಡಿಸಿಎಂ ಪರಮೇಶ್ವರ್ ಅವರು ಸುಳಿವು ನೀಡಿದ್ದರು. ಆದರೆ ಇನ್ನೂ ಕಾರ್ಯಾಚರಣೆ ಆರಂಭವಾಗದ ಬಗ್ಗೆ ಜನರಿಂದ ಟೀಕೆ ವ್ಯಕ್ತವಾಗಿತ್ತು.
ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ವಿಜ್ಞಾನಿಗಳು ಕೊಡಗಿನಲ್ಲಿ ಬಿದ್ದ ಮಳೆಯ 10% ಮಳೆ ಬೆಂಗಳೂರಿನಲ್ಲಿ ಬಿದ್ದರೆ ಹಲವು ಪ್ರದೇಶಗಳು ಜಲಾವೃತವಾಗಲಿದೆ ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೊಡಗು ಮಳೆ ಅನಾಹುತದಿಂದ ಎಚ್ಚೆತ್ತ ಬಿಬಿಎಂಪಿ ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈ ಹಾಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv