ಬೆಂಗಳೂರು: ನಿಯಮ ರೂಪಿಸಿದವರೇ ನಿಯಮವನ್ನು ಗಾಳಿಗೆ ತೂರಿದ್ದು, ಊರಿಗೇ ನ್ಯಾಯ ಹೇಳುವ ಹಾಗೂ ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸುವ ಬಿಬಿಎಂಪಿಯಲ್ಲೇ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯಾದ್ಯಂತ ಒಂದು ಬಾರಿ ಬಳಸುವ ಪ್ಲಾಸ್ಟಿಕ್‍ನ್ನು ಬಿಬಿಎಂಪಿ ನಿಷೇಧ ಮಾಡಿದೆ. ಆದರೆ ಈ ನಿಯಮ ಇಂದಿರಾ ಕ್ಯಾಂಟೀನಿಗೆ ಮಾತ್ರ ಅನ್ವಯವಾಗುವುದಿಲ್ಲ. ಪೌರ ಕಾರ್ಮಿಕರಿಗೆ ನೀಡುವ ಇಂದಿರಾ ಕ್ಯಾಂಟೀನ್ ಆಹಾರದ ಬಾಕ್ಸ್ ಗೆ ಪ್ಲಾಸ್ಟಿಕ್ ಕವರ್ ಬಳಸಲಾಗುತ್ತಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ವಿವಿಧ ಕೆಲಸಗಳಲ್ಲಿಯೂ ಸಹ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇದನ್ನು ಕಂಡ ಸಾರ್ವಜನಿಕರು ಪ್ಲಾಸ್ಟಿಕ್ ನಿಷೇಧ ಜನ ಸಾಮಾನ್ಯರಿಗೆ ಮಾತ್ರವೇ ಬಿಬಿಎಂಪಿಗೆ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ಕಂಡ ಕಂಡಲ್ಲಿ ದಾಳಿ ಮಾಡಿ ಪ್ಲಾಸ್ಟಿಕ್ ಬಳಸುತ್ತಿರುವ ವರ್ತಕರಿಗೆ ದಂಡ ವಿಧಿಸಿ, ಪ್ಲಾಸ್ಟಿಕ್ ಪರಿಕರಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಆದರೆ ಇನ್ನೊಂದೆಡೆ ತಾವೇ ರಾಜಾರೋಷವಾಗಿ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‍ನಿಂದ ಪೌರ ಕಾರ್ಮಿಕರಿಗೆ ಪ್ರತಿನಿತ್ಯ ಬಾಕ್ಸ್ ಗಳಲ್ಲಿ ಊಟ ಕಳುಹಿಸುತ್ತಾರೆ. ಈ ಬಾಕ್ಸ್ ಗಳನ್ನು ಮುಚ್ಚಲು ಮುಚ್ಚಳಗಳನ್ನು ಬಳಸುವ ಬದಲು, ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೌರ ಕಾರ್ಮಿಕರು ಇಂದಿರಾ ಕ್ಯಾಂಟೀನ್ ಊಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಮಗೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಊಟದಲ್ಲಿ ರುಚಿಯಿಲ್ಲ, ಅದನ್ನು ತಿನ್ನಲು ಆಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜೊತೆಗೆ ಅಕ್ಟೋಬರ್ 1ರಿಂದ ಇಂದಿರಾ ಕ್ಯಾಂಟೀನ್ ಊಟಕ್ಕೆ ಬ್ರೇಕ್ ಹಾಕಲು ಪೌರ ಕಾರ್ಮಿಕರ ಗುತ್ತಿಗೆದಾರರು ಮುಂದಾಗಿದ್ದಾರೆ. ಆ ಊಟದಲ್ಲಿ ಏನೂ ರುಚಿಯೇ ಇರಲ್ಲ, ಸಂಬಾರ್ ನೀರಿನಂತಿರುತ್ತದೆ. ಅದನ್ನು ನಾವು ತಿನ್ನುವುದೇ ಇಲ್ಲ ಮನೆಯಿಂದ ಊಟ ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಪ್ಲಾಸ್ಟಿಕ್ ಬಳಸಿದ್ದಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಪ್ಲಾಸ್ಟಿಕ್ ಬಳಸಿದ್ದಕ್ಕೆ ತಪ್ಪು ಒಪ್ಪಿಕೊಂಡು ಮೇಯರ್ ಕ್ಷಮೆಯಾಚಿಸಿದ್ದರು. ಅಲ್ಲದೆ, ದಂಡ ಪಾವತಿಸುವುದಾಗಿಯೂ ಸಹ ತಿಳಿಸಿದ್ದರು. ಇಷ್ಟಾದರೂ ಸಹ ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಕುರಿತು ಎಚ್ಚೆತ್ತುಕೊಂಡಿಲ್ಲ.