ಬೆಂಗಳೂರು: ಗುಂಡಿ ಮುಕ್ತ ರಸ್ತೆ ಮಾಡಲು ವಿಫಲವಾಗಿರುವ ಸಮ್ಮಿಶ್ರ ಸರ್ಕಾರ, ಈಗ ಬೆಂಗಳೂರು ನಾಗರಿಕರಿಗೆ ಆಘಾತವಾಗುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ. ಹದಗೆಟ್ಟ ರಸ್ತೆಗಳಿಂದ ಭಾರೀ ನಷ್ಟವಾಗಿದ್ದು, ಕರ ಸಂಗ್ರಹಕ್ಕೆ ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೀಡಿದ್ದ ಸಲಹೆಗೆ ಸಮ್ಮತಿ ಸೂಚಿಸಿದೆ.
ನಗರದಲ್ಲಿನ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿವೆ. ಇದರಿಂದ ರಸ್ತೆಗಳಲ್ಲಿ ಓಡಾಡುವ ಬಿಎಂಟಿಸಿ ಬಸ್‍ಗಳು ಆಗಾಗ ಹದಗೆಡುತ್ತಿವೆ. ಇದರಿಂದಾಗಿ ಬಿಎಂಟಿಸಿಗೆ ಹೆಚ್ಚಿನ ನಿರ್ವಹಣೆ ಹೊರೆ ಬೀಳುತ್ತಿದೆ. ಬಿಬಿಎಂಪಿಯೇ ಬಿಎಂಟಿಸಿ ಇಲಾಖೆಗೆ ಹಣ ನೀಡಬೇಕೆಂದು ಕೆಲದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
Advertisement
Advertisement
ಸಾರಿಗೆ ಸಚಿವ ಡಿಸಿ ತಮ್ಮಣ್ಣ ಪ್ರಸ್ತಾವನೆ ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ಸಾರ್ವಜನಿಕರಿಗೆ 2% ರಷ್ಟು ಭೂ ಸಾರಿಗೆ ಉಪಕರ ವಿಧಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಉಸ್ತುವಾರಿ ಸಚಿವ ಡಾ. ಪರಮೇಶ್ವರ್, ಬಿಬಿಎಂಪಿಗೆ ತನ್ನ ಸಂಪನ್ಮೂಲ ಕ್ರೋಡಿಕರಿಸುವ ಹಕ್ಕಿದೆ. ಕಾನೂನು ಬಾಹಿರವಾಗಿದ್ದರೆ ಮಾತ್ರ ಸರ್ಕಾರ ಮಧ್ಯಪ್ರವೇಶಿಸುತ್ತದೆ ಎಂದು ತಿಳಿಸಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
ಕರ ವಿಧಿಸುವ ಬಗ್ಗೆ ಸಾರ್ವಜನಿಕರು ಹಾಗೂ ಬಿಬಿಎಂಪಿ ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಆಸ್ತಿ ಮಾಲೀಕರು ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದು, ಮತ್ತೆ ಹೆಚ್ಚುವರಿ ತೆರಿಗೆ ಹೊರೆ ಹಾಕುವುದು ಸರಿಯಲ್ಲ. ಅಲ್ಲದೆ ಎರಡು ವರ್ಷಗಳ ಹಿಂದೆ ಆಸ್ತಿ ತೆರಿಗೆ 20% ರಿಂದ 25% ಹೆಚ್ಚಿಸಿ ಆಸ್ತಿ ಮಾಲೀಕರಿಗೆ ಹೆಚ್ಚಿನ ಹೊರೆ ಹೊರಿಸಿತ್ತು. ಹಾಗಾಗಿ ಮತ್ತೆ ತೆರಿಗೆದಾರರಿಗೆ ಕರದ ಹೊರೆ ಹೊರಿಸಲು ಬಿಡುವುದಿಲ್ಲ ಎಂದು ಬಿಬಿಎಂಪಿ ವಿರೋಧ ಪಕ್ಷ ನಾಯಕ ಪದ್ಮನಾಭ ರೆಡ್ಡಿ ಆಡಳಿತ ಪಕ್ಷದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಹೆಚ್ಚುವರಿ ತೆರಿಗೆ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಉಪಕರ ವಿಧಿಸುವ ಜವಾಬ್ದಾರಿ ಬಿಬಿಎಂಪಿ ಹೊತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಬೇಕಿದೆ. ನರ್ಮ್ ಯೋಜನೆಯಡಿಯಲ್ಲಿ ತೆರಿಗೆ ಸೆಸ್ ವಿಧಿಸಬೇಕಂಬ ನಿಯಮವಿದೆ. ಅದರ ಪ್ರಕಾರ ಸೆಸ್ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು.
ಒಟ್ಟಾರೆ ಉಪಕರ ವಿಧಿಸಿ ಮತ್ತೆ ತೆರಿಗೆದಾರರಿಗೆ ಹೊರೆ ಹೆಚ್ಚಿಸಲು ಪಾಲಿಕೆ ಮುಂದಾಗಿದ್ದು, ಈ ವಿಷಯವನ್ನು ಮಂಗಳವಾರ ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಮುಂದಿಡಲಾಗುತ್ತದೆ. ಒಂದೊಮ್ಮೆ ಸಭೆಯಲ್ಲಿ ವಿಷಯ ಅನುಮೋದನೆಗೊಂಡರೆ ತೆರಿಗೆದಾರರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
ಕಳಪೆ ರಸ್ತೆ ಮಾಡುವ ಗುತ್ತಿಗೆದಾರರ ಬೇಜವಾಬ್ದಾರಿ ಹಾಗೂ ಬಿಎಂಟಿಸಿ ವೆಚ್ಚಕ್ಕೂ ನೇರವಾಗಿ ಜನರೇ ತೆರಿಗೆ ವಾಪತಿಸುವುದು ಎಷ್ಟು ಸರಿ? ರಸ್ತೆಗಳಿಂದ ಬಿಎಂಟಿಸಿಗೆ ಆಗಿರುವ ನಷ್ಟ ತುಂಬಲು ಬಿಬಿಎಂಪಿಯೇನೋ ಜನರಿಗೆ ಹೊರೆ ಹೊರೆಸುತ್ತಿದೆ. ಆದೆ ಇದೇ ಗುಂಡಿಗಳಿಂದ ಸಾರ್ವಜನಿಕರ ವಾಹನಗಳಿಗೆ ಆಗಿರುವ ಹಾನಿಯನ್ನು ಭರಿಸುವವರ್ಯಾರು? ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕಿ ಭಾರೀ ಟೀಕೆಗೆ ಗುರಿಯಾಗಿರುವ ಸರ್ಕಾರ ಈಗ ವಿಶೇಷವಾಗಿ ಬೆಂಗಳೂರಿಗರ ಮೇಲೆ ವಿಶೇಷ ಸೆಸ್ ಹಾಕಲು ಮುಂದಾಗಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.
ಭೂಸಾರಿಗೆ ಕರ ಹೇಗೆ ಜಾರಿ?
ನೇರವಾಗಿ ಭೂ ಸಾರಿಗೆ ಕರ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ ಈಗಿರುವ ಆಸ್ತಿ ತೆರಿಗೆಯನ್ನು ಜಾಸ್ತಿ ಮಾಡಲಾಗುತ್ತದೆ. ಒಂದೊಂದು ಪ್ರದೇಶಕ್ಕೆ ಒಂದೊಂದು ಆಸ್ತಿ ತೆರಿಗೆ ಇದೆ. ಎಂಜಿ ರಸ್ತೆಯಲ್ಲಿನ ಆಸ್ತಿ ತೆರಿಗೆಯೇ ಬೇರೆ, ಬಗಲಗುಂಟೆಯಲ್ಲಿನ ತೆರಿಗೆಯೇ ಬೇರೆ ಇದೆ. ಸದ್ಯ ಆಸ್ತಿ ತೆರಿಗೆಯಿಂದ ಸುಮಾರು ವರ್ಷಕ್ಕೆ 2 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ. ಈಗ 2% ರಷ್ಟು ಕರ ವಿಧಿಸಿದರೆ ಅಂದಾಜು 40 ಕೋಟಿ ರೂ. ತೆರಿಗೆ ಸಂಗ್ರಹವಾಗಬಹುದು. ಈ ಹಣವನ್ನು ಸಾರಿಗೆ ಸಂಸ್ಥೆ ನೀಡಲಾಗುತ್ತದೆ.
2011-2012 ರಿಂದ 2016-17ರವರೆಗಿನ ಅವಧಿಯಲ್ಲಿ ಬಿಎಂಟಿಸಿಗೆ 608 ಕೋಟಿ ರೂ. ನಷ್ಟವಾಗಿದೆ. ಒಟ್ಟು ಆದಾಯದಲ್ಲಿ 27.27% ಹಣ ಡೀಸೆಲ್ ಖರೀದಿಗೆ ಖರ್ಚಾದರೆ 53% ಹಣ ಸಿಬ್ಬಂದಿ ಸಂಬಳಕ್ಕೆ ಹೋಗುತ್ತದೆ. ಬಿಎಂಟಿಸಿಗೆ ವಿಶೇಷವಾಗಿ ಮೆಟ್ರೋ ಸಂಚರಿಸುವ ಮಾರ್ಗಗಳಲ್ಲಿ ಕಡಿಮೆ ಆದಾಯ ಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv