ಬೆಂಗಳೂರು: ವಿಧಾನಸೌಧ, ರಾಜಭವನ (Raj Bhavan) ಸೇರಿ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಒಟ್ಟು 258 ಸರ್ಕಾರಿ ಕಟ್ಟಡಕ್ಕೆ ಬಿಬಿಎಂಪಿ ನೋಟಿಸ್ ನೀಡಿದೆ.
ಈಗಾಗಲೇ ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಇಲಾಖೆಗಳು (Government Departments) ಬರೋಬ್ಬರಿ 8 ಸಾವಿರ ಕೋಟಿ ರೂ.ಗಳಷ್ಟು ವಿದ್ಯುಲ್ ಬಿಲ್ ಬಾಕಿ ಉಳಿಸಿಕೊಂಡಿವೆ. ಈ ಬೆನ್ನಲ್ಲೇ ಇಂತಹದ್ದೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಖುದ್ದು ಬಿಬಿಎಂಪಿ ಅಧಿಕಾರಿಗಳೇ ಈ ಬಗ್ಗೆ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ.
ಹೌದು. ವಿಧಾನಸೌಧ (Vidhana Soudha), ವಿಕಾಸ ಸೌಧ, ರಾಜಭವನ ಸೇರಿ ಅನೇಕ ಸರ್ಕಾರಿ ಕಟ್ಟಗಳು ಕೋಟಿಗಟ್ಟಲೆ ಆಸ್ತಿ ತೆರಿಗೆ (Property Tax) ಬಾಕಿ ಉಳಿಸಿಕೊಂಡಿವೆ. ಈಗಾಗಲೇ ನೋಟಿಸ್ ಸಹ ನೀಡಲಾಗಿದೆ. ಈ ಪೈಕಿ ಕೆಲವು ಕಟ್ಟಡಗಳು 17 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಆಯಾ ಇಲಾಖೆ ಮುಖ್ಯಸ್ಥರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ಒಂದು ವೇಳೆ ತೆರಿಗೆ ಪಾವತಿ ಮಾಡದಿದ್ದರೆ, ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.