ಬೆಂಗಳೂರು: ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ರಸ್ತೆ ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ, ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದರೂ, ಪ್ಲಾಸ್ಟಿಕ್ ಹಾವಳಿ ಕಡಿಮೆಯಾಗಿಲ್ಲ. ಇದರಿಂದ ಕಸ ವಿಲೇವಾರಿಗೂ ಸಮಸ್ಯೆಯಾಗುತ್ತಿದೆ. ಆದುದರಿಂದ ಇನ್ನು ಮುಂದೆ ಪ್ಲಾಸ್ಟಿಕ್ ಅನ್ನು ಡಾಂಬರೀಕರಣಕ್ಕೆ ಬಳಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Advertisement
ಈ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್‍ಕೆ ಅತೀಕ್ ಅವರು ಉಪಸ್ಥಿತರಿದ್ದರು.
Advertisement
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯಕ್ತ ಮಂಜುನಾಥ ಪ್ರಸಾದ್, ನಗರದಲ್ಲಿ ಈವರೆಗೆ ಒಂದು ಲಕ್ಷ ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು 1.67 ಕೋಟಿ ರೂ. ದಂಡ ವಿಧಿಸಲಾಗಿದೆ. ಆದರೆ ಕೇಸು ದಾಖಲು ಮಾಡುವ ಅಧಿಕಾರ ನಮಗೆ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಬಳಸಿಕೊಳ್ಳಲು ನಿರ್ಣಯಿಸಿದೆ ಎಂದು ವಿವರಿಸಿದರು.
Advertisement
ಇದರಲ್ಲಿ ವಿಜಿ-10 ಮತ್ತು ವಿಜಿ-30 ಎಂಬ ಎರಡು ಮಾದರಿಗಳಿವೆ. ವಿಜಿ-30ಯಲ್ಲಿ ಹೈಗ್ರೇಡ್ ವಿಟಮಿನ್ ಇರುತ್ತದೆ. ಇದನ್ನು ಎಸ್‍ಆರ್ ದರದಲ್ಲಿ ಸೇರಿಸಲಾಗಿದೆ. ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಸುವುದರಿಂದ ಹೆಚ್ಚು ಬಾಳಿಕೆ ಬರುತ್ತದೆ. ಟನ್ ವಿಟಮಿನ್‍ಗೆ 32 ಸಾವಿರ ರೂ. ವೆಚ್ಚವಾಗುತ್ತದೆ. ಶೇ. 8ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ವಿಟಮಿನ್‍ಗೆ 2,100 ಹೆಚ್ಚುವರಿ ವೆಚ್ಚವಾಗುತ್ತದೆ. ಆದರೂ ರಸ್ತೆಗಳು ಹೆಚ್ಚು ಬಾಳಿಕೆ ಬರುವುದರ ಜತೆಗೆ ವಾಹನಗಳ ಸಂಚಾರ ಸುಗಮವಾಗಿರುತ್ತದೆ. ನಗರದಲ್ಲಿ ಪ್ಲಾಸ್ಟಿಕ್ ಹೆಚ್ಚು ಸಂಗ್ರಹವಾಗುವುದರಿಂದ ಅನುಕೂಲವಾಗುತ್ತದೆ. ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಬೀಳಲಿದೆ ಎಂದು ಹೇಳಿದ್ದಾರೆ.