ಬೆಂಗಳೂರು: ಹೊಸವರ್ಷದಂದು ರಾತ್ರಿ 12 ಗಂಟೆಗೆ ಹುಟ್ಟಿದ ಹೆಣ್ಣು ಮಗುವಿಗೆ 5 ಲಕ್ಷ ರೂ. ನೀಡೋ ಮೂಲಕ ಬಿಬಿಎಂಪಿ ಭರ್ಜರಿ ಗಿಫ್ಟ್ ನೀಡಿದೆ.
ಹೊಸವರ್ಷದ ಮೊದಲ ದಿನವೇ ಗೋಪಿ-ಪುಷ್ಪಾ ದಂಪತಿಗೆ ಹುಟ್ಟಿದ ಹೆಣ್ಣು ಮಗುವಿಗೆ ಬಿಬಿಎಂಪಿ ಈ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ರಾಜಾಜಿನಗರದ ಡಾ.ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ 12.05 ಕ್ಕೆ ಹೆಣ್ಣು ಮಗು ಜನಿಸಿದೆ. ಕೂಡಲೇ ಸ್ಥಳಕ್ಕೆ ಮೇಯರ್ ಸಂಪತ್ ರಾಜ್ ತೆರಳಿ ಬಹುಮಾನ ಘೋಷಿಸಿದ್ದಾರೆ.
Advertisement
Advertisement
ತಮ್ಮ ಮಗುವಿಗೆ ಒಲಿದ ಈ ಅದೃಷ್ಟದಿಂದ ದಂಪತಿ ಖುಷಿಯಾಗಿದ್ದಾರೆ. ಮೇಯರ್ ಇದೇ ಮೊದಲ ಬಾರಿ ಈ ಬಗೆಯ ಬಹುಮಾನ ಘೋಷಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಹಾಗೂ ಮಗುವಿನ ಹೆಸರಿನಲ್ಲಿ ಐದು ಲಕ್ಷ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಈ ಹಣವನ್ನು 18 ವರ್ಷದ ನಂತರ ಮಗುವಿನ ಉನ್ನತ ಶಿಕ್ಷಣಕ್ಕೆ ಬಳಕೆ ಮಾಡಬಹುದು. ಐದು ಲಕ್ಷದ ಠೇವಣಿಯ ಬಡ್ಡಿ ಹಣವನ್ನು ಪ್ರತಿ ವರ್ಷ ಶಿಕ್ಷಣಕ್ಕೆ ಉಪಯೋಗಿಸಬಹುದು. ಹಣವನ್ನು ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ಬಳಸಲು ದಂಪತಿ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೇಯರ್ ಸಂಪತ್ ರಾಜ್, ಬಡವರ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ್ರೆ ಕಷ್ಟ ಅಂದುಕೊಳ್ಳುವ ಜನ ತುಂಬಾ ಇದ್ದಾರೆ. ಆದ್ರೇ ಇದೀಗ ಪರಿಸ್ಥಿತಿ ಬದಲಾಗಿದೆ. ಬಿಬಿಎಂಪಿಯಲ್ಲಿಯೇ 102 ಜನ ಮಹಿಳೆಯರು ಜನಪ್ರತಿನಿಧಿಗಳಿದ್ದಾರೆ. ಮಗು ಹಾಗೂ ಬಿಬಿಎಂಪಿ ಕಮಿಷನರ್ ಹೆಸರಿನಲ್ಲಿ ಐದು ಲಕ್ಷ ರೂ. ಹಣ ಠೇವಣಿ ಇಡಲಾಗಿದೆ. ಮಗುವಿನ ಶಿಕ್ಷಣಕ್ಕೆ ಮಾತ್ರ ಈ ಹಣ ಬಳಕೆಯಾಗಲಿದೆ. ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸೋ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದ್ರು.
ಮಗುವಿನ ತಾಯಿ ಪುಷ್ಪಾ ಸಿಎಂ ಸಿದ್ದರಾಮಯ್ಯನವರ ತವರು ಸಿದ್ದರಾಮನಹುಂಡಿಯವರು ಎಂದು ತಿಳಿದುಬಂದಿದೆ.