ಬೆಂಗಳೂರು: ಬಿಬಿಎಂಪಿ (BBMP) ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ (Accident) ಮೃತ ಪಟ್ಟ ಯುವತಿಯ ಮದುವೆಗೆ (Marriage) ಕುಟುಂಬ ಸಿದ್ಧತೆ ನಡೆಸಿತ್ತು.
ಕೆಆರ್ ಸರ್ಕಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಅಪಘಾತದಲ್ಲಿ ಯುವಕ ಪ್ರಶಾಂತ್ ಮತ್ತು ಯುವತಿ ಶಿಲ್ಪಾ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮೃತಪಟ್ಟ ಯುವತಿಯ ಮದುವೆಗೆ ಪೋಷಕರು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಮೃತ ಶಿಲ್ಪ ಆಂಧ್ರಪ್ರದೇಶದ ಇಂದುಪುರ ನಿವಾಸಿಯಾದ್ದು, ನಾಗವಾರದ ಪಿಜಿಯಲ್ಲಿ ವಾಸವಾಗಿದ್ದರು. ಶಿಲ್ಪ ತಂದೆ ವೆಂಕಟರಾಮ ರೆಡ್ಡಿ ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಗೆ ಒಟ್ಟು ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಆಗಿದೆ. ಶಿಲ್ಪ ಕೊನೆಯ ಮಗಳಾಗಿದ್ದು, ಮದುವೆ ತಯಾರಿ ಮಾಡಿಕೊಂಡು, ಅದಕ್ಕಾಗಿ ಚಿನ್ನವನ್ನು ಮಾಡಿಸಿಟ್ಟಿದ್ದರು ಎಂಬ ವಿಚಾರ ತಿಳಿದು ಬಂದಿದೆ.
ಶಿಲ್ಪ ಮದುವೆ ವಿಚಾರವಾಗಿ ಭಾನುವಾರ ಬೆಳಗ್ಗೆ ಸಹ ವೆಂಕಟರಾಮ ರೆಡ್ಡಿಯವರು ಪ್ರಸ್ತಾಪ ಮಾಡಿದ್ದರು. ದುರಾದೃಷ್ಟವಶಾತ್ ಸಂಜೆ ಹೊತ್ತಿಗೆ ಯುವತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.
ಇನ್ನೂ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಹಲಸೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.