ಚಿಕ್ಕಬಳ್ಳಾಪುರ: ಬಿಬಿಎಂಪಿ (BBMP) ಕಸದ ಲಾರಿ ಹಾಗೂ ಬೈಕ್ (Bike) ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ನಡೆದಿದೆ.
ಮೃತರು ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದ ಮಹೇಶ್ (27), ಮಾರುತಿ (24) ಎಂದು ಗುರುತಿಸಲಾಗಿದೆ. ತಾಲೂಕಿನ ಮಧುರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ದೊಡ್ಡಬಳ್ಳಾಪುರದ ಬಳಿಯ ಎಂಎಸ್ ಜಿಪಿ ಘಟಕಕ್ಕೆ ಕಸ ಸುರಿಯಲು ಬೆಂಗಳೂರಿಂದ ಬಂದ ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ರಸ್ತೆಯಲ್ಲಿ ಬಿದ್ದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಂತರ ಚಾಲಕ ಸ್ಥಳದಿಂದ ಪರಾರಿಯಾಗುತ್ತಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಚಾಲಕ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಹಿಂದೂ ಸಂಕೇತ ಬಳಸಿ, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ – ಪೇಜಾವರ ಶ್ರೀ ಬೇಸರ
ಈ ವೇಳೆ ಲಾರಿಯ ಚಾಲಕ ಪಾನಮತ್ತನಾಗಿದ್ದು, ತಡೆಯಲು ಹೋದ ಕಾರಿಗೂ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಮೃತ ಯುವಕರ ಶವವನ್ನು ತೆರವು ಮಾಡಲು ಬಿಡದೆ, ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ಮತ್ತಿತರರು ಭೇಟಿ ನೀಡಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಸಹ ಓರ್ವ ಬೈಕ್ ಸವಾರ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದ. ಈಗ ಇಬ್ಬರು ಸಾವನ್ನಪ್ಪಿದ್ದು ಬಿಬಿಎಂಪಿ ಕಸದ ಲಾರಿಗಳ ವಿರುದ್ಧ ಸ್ಥಳೀಯರು ತಿರುಗಿಬಿದ್ದು ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ : ಪರಿಷತ್ ಸದಸ್ಯ ರಾಜೇಂದ್ರ ಕಿಡಿ