– ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಕ್ರಮ
ಬೆಂಗಳೂರು: ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಬಿಬಿಎಂಪಿ ಮಾಸ್ಕ್ ಹಾಕದವರಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು ಕಡಿಮೆ ಮಾಡಿದೆ.
Advertisement
ರಾಜ್ಯ ಸರ್ಕಾರದಿಂದ ಸುಗ್ರೀವಾಜ್ಞೆ ಜಾರಿ ಮಾಡಲಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ದಂಡ ವಿಧಿಸುವ ಕುರಿತು ಎಚ್ಚರಿಕೆ ನೀಡಿದೆ. ಇದರಲ್ಲಿ ಮಾಸ್ಕ್ ಹಾಕದವರಿಗೆ ದಂಡ ಎಷ್ಟು ವಿಧಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಏನು ಕ್ರಮ ಜರುಗಿಸಬೇಕು ಎಂಬುದನ್ನೂ ತಿಳಿಸಲಾಗಿದೆ. ಸುಗ್ರೀವಾಜ್ಞೆಯಲ್ಲಿ ದಂಡದ ಪ್ರಮಾಣವನ್ನು ನಮೂದಿಸಿದ್ದು, ಅದರಂತೆ ಬಿಬಿಎಂಪಿ ಸಹ ಕಡಿಮೆ ಮಾಡಿದೆ.
Advertisement
ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಹಾಕದಿದ್ದರೆ ಈ ಹಿಂದೆ ಮೊದಲ ಬಾರಿ 1 ಸಾವಿರ ರೂ. ಹಾಗೂ ಎರಡನೇ ಬಾರಿ 2 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಇದೀಗ ಈ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯ ನಿಯಮದ ಪ್ರಕಾರ ನಗರ ಪ್ರದೇಶದಲ್ಲಿ 200 ರೂ, ಗ್ರಾಮೀಣ ಭಾಗದಲ್ಲಿ 100 ರೂ. ನಿಗದಿಪಡಿಸಲಾಗಿದೆ. ಅದರಂತೆ ಬಿಬಿಎಂಪಿ 200 ರೂ.ದಂಡ ವಿಧಿಸಲು ತೀರ್ಮಾನಿಸಿದ್ದು, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ದಂಡದ ಮೊತ್ತವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದ್ದಾರೆ.
Advertisement
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಓಡಾಡುವಾಗ ಮೂಗು, ಬಾಯಿ ಪೂರ್ಣವಾಗಿ ಮುಚ್ಚುವಂತೆ ಬಟ್ಟೆ / ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು ಪ್ರತಿಬಾರಿ ರೂ. 200 ದಂಡ ವಿಧಿಸುವರು. pic.twitter.com/cd3uIeFAKj
— B.H.Anil Kumar,IAS (@BBMPCOMM) May 5, 2020
Advertisement
ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯ ಪ್ರಕಾರ ಕನಿಷ್ಟ 1 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ದಂಡ ಕಟ್ಟಬೇಕು. ದಂಡ ವಿಧಿಸುವ ಅಧಿಕಾರವನ್ನು ಸಬ್ ಇನ್ಸ್ ಪೆಕ್ಟರ್, ಆರೋಗ್ಯಾಧಿಕಾರಿ, ಪಿಡಿಒ ಸರ್ಕಾರ ನೇಮಕ ಮಾಡುವ ಅಧಿಕಾರಿಗಳಿಗೆ ವಹಿಸಲಾಗಿದೆ.
ಈಗಾಗಲೇ ಹಲವು ರಾಜ್ಯಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ದಂಡ ವಿಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಇದೀಗ ರಾಜ್ಯ ಸರ್ಕಾರ ಸಹ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿಗೆ ತಂದಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ದಂಡ ವಿಧಿಸುವ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದಲೇ ಈ ನಿಯಮ ಜಾರಿಯಲ್ಲಿದೆ. ಸಾರ್ವಜನಿಕವಾಗಿ ಮಾಸ್ಕ್ ಹಾಕದಿದ್ದರೆ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಮಾಡಿದರೆ, ಮಾಸ್ಕ್ ವಿಲೇವಾರಿ ಸರಿಯಾಗಿ ಮಾಡದಿದ್ದರೆ ದಂಡ ಬೀಳುವುದು ಖಚಿತ. ಮುಲಾಜಿಲ್ಲದೆ ದಂಡ ವಿಧಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.