ಬೆಂಗಳೂರು: ಆಸ್ತಿ ತೆರಿಗೆ, ಸರ್ಕಾರಗಳಿಂದ ಬರುವ ಅನುದಾನ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೂಲಕ ಸಾವಿರಾರು ಕೋಟಿ ಆದಾಯ ಗಳಿಸಿರುವ ಬಿಬಿಎಂಪಿಗೆ ಇದೀಗ ಹೊಸದೊಂದು ಆದಾಯದ ಮೂಲ ಸೇರ್ಪಡೆಗೊಂಡಿದೆ. ಅದೇ ಹಂದಿ ಮಾಂಸ ಮಾರಾಟ.
ಹೌದು. ಹಂದಿ ಮಾಂಸ ಮಾರಾಟದ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಐದು ಸಾವಿರ ರೂಪಾಯಿ ಆದಾಯ ಬಂದಿದೆಯಂತೆ. ಬೆಂಗಳೂರಿನಲ್ಲಿರೋ ಇಲಿ ಹಿಡಿಯೋಕೆ, ನಾಯಿ ಹಿಡಿಯೋಕೆ ಕೋಟಿ ಕೋಟಿ ಖರ್ಚು ಮಾಡಿ ಬಿಬಿಎಂಪಿ ಹಣವನ್ನು ನಷ್ಟ ಮಾಡೋ ಅಧಿಕಾರಿಗಳು, ಇದೀಗ ಬೆಂಗಳೂರಿನಲ್ಲಿರೋ ಬಿಡಾಡಿ ಹಂದಿಗಳನ್ನು ಹಿಡಿಯೋ ಮೂಲಕ ಬಿಬಿಎಂಪಿಗೆ ಮತ್ತೊಂದು ಆದಾಯ ಮೂಲ ಹುಡುಕಿದ್ದಾರೆ.
ಜನರಿಗೆ ತೊಂದರೆ ಕೊಡುವ ಬಿಡಾಡಿ ಹಂದಿಗಳನ್ನು ಹಿಡಿಯಲು ಬಿಬಿಎಂಪಿ ಗುತ್ತಿಗೆ ನೀಡಿತ್ತು. ಅದರಂತೆ ಈ ವರ್ಷದಲ್ಲಿ 36 ಹಂದಿಗಳನ್ನು ಹಿಡಿಯಲಾಗಿದೆ. ಆ ಎಲ್ಲ ಹಂದಿಗಳ ತೂಕ 460 ಕೆ.ಜಿ.ಗಳಾಗಿದ್ದು, ಪ್ರತಿ ಕೆ.ಜಿ.ಗೆ 45 ರೂ.ಗಳಂತೆ ಮಾರಾಟ ಮಾಡಲಾಗಿದೆ. ಹಂದಿ ಮಾರಾಟದಿಂದಾಗಿ ಬಿಬಿಎಂಪಿಗೆ 23,000 ರೂ. ಆದಾಯ ಬಂದಿದೆ. ಅದರಲ್ಲಿ ಹಂದಿ ಹಿಡಿದಿದಕ್ಕಾಗಿ ಪ್ರತಿ ಹಂದಿಗೆ 500 ರೂ.ಗಳಂತೆ ಗುತ್ತಿಗೆದಾರರಿಗೆ 18 ಸಾವಿರ ರೂ.ಗಳನ್ನು ಪಾವತಿಸಲಾಗಿದೆ. ಅದರಿಂದಾಗಿ ಬಿಬಿಎಂಪಿಗೆ 5 ಸಾವಿರ ರೂ. ಉಳಿದಿರೋದಾಗಿ ಅಧಿಕಾರಿಗಳು ಲೆಕ್ಕ ನೀಡಿದ್ದಾರೆ.
2017-18ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳವರೆಗೆ ಹಂದಿಗಳ ಕಾಟಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಬಂದಿದ್ದ 36 ದೂರುಗಳು ಪೈಕಿ 15 ದೂರುಗಳನ್ನ ಅಟೆಂಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.