– ಕಣ್ಣೀರಿಟ್ಟು ಅಸಮಾಧನಾ ಹೊರ ಹಾಕಿದ ಮಹಿಳಾ ಕಾರ್ಪೋರೇಟರ್
– ಸತೀಶ್ ರೆಡ್ಡಿ ಅಸಮಾಧಾನಕ್ಕೆ ಹಾಡು ಹಾಡಿದ ಆರ್.ಅಶೋಕ್
ಬೆಂಗಳೂರು: ಮೂರು ಬಾರಿ ಮುಂದೂಡಲ್ಪಟ್ಟ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ಕಡೆಗೂ ನಡೆದಿದೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ಅಸಮಾಧಾನಗಳ ನಡುವೆ 131 ಸ್ಥಾಯಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆ ಎರಡು ಬಾರಿ ಮುಂದೂಡಲಾಗಿತ್ತು. ಪ್ರತಿ ಬಾರಿಯು ಪ್ರಾದೇಶಿಕ ಆಯಕ್ತರು ಚುನಾವಣೆ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದರು. ಆದರೆ ಮೂರು ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸದೇ ಇರುವುದರಿಂದ ಕೊರಂ ಕೊರತೆ ಉಂಟಾಗಿ ಮೂರನೇ ಬಾರಿಯೂ ಚುನಾವಣೆ ಮುಂದೂಡಲಾಗಿತ್ತು. ಕೊನೆಗೆ ಶನಿವಾರ ನಡೆದ ಚುನಾವಣೆ ಹಲವು ಅಸಮಾಧಾನಗಳ ನಡುವೆಯೂ ಯಶಸ್ವಿಯಾಗಿ ಮುಗಿಯಿತು.
Advertisement
Advertisement
ಈ ಬಾರಿಯ ಹನ್ನೆರಡು ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಹನ್ನೆರಡು ಸ್ಥಾಯಿ ಸಮಿತಿಗಳಿಗೆ 12 ಅಧ್ಯಕ್ಷರನ್ನೂ ಅಂತಿಮಗೊಳಿಸಲಾಗಿದೆ. ಮೂಲ ಬಿಜೆಪಿಗರಿಗೆ 9, ಪಕ್ಷೇತರ, ಕಾಂಗ್ರೆಸ್, ಜೆಡಿಎಸ್ ವಲಸಿಗರಿಗೆ ತಲಾ ಒಂದೊಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿದೆ. ಆದರೆ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಒಂದು ಸದಸ್ಯರ ಕೊರತೆಯಾಗಿದ್ದು, ಉಳಿದ ಎಲ್ಲಾ ಸಮಿತಿಗಳಿಗೆ ತಲಾ ಹನ್ನೊಂದು ಸದಸ್ಯರಂತೆ 131 ಸದಸ್ಯರನ್ನು ಅಂತಿಮಗೊಳಿಸಲಾಗಿದೆ. ಅಧ್ಯಕ್ಷರ ಹೆಸರನ್ನು ಮೇಯರ್ ಮುಂದಿನ ವಾರ ಘೋಷಿಸುತ್ತಾರೆ ಎಂದು ಆಡಳಿತ ಪಕ್ಷದ ನಾಯಕ ಮುನೇಂದ್ರ ಕುಮಾರ್ ತಿಳಿಸಿದ್ದಾರೆ.
Advertisement
Advertisement
ಈ ಬಾರಿ ಅಧ್ಯಕ್ಷರಾದವರಿಗೆ ಕೇವಲ ಆರು ತಿಂಗಳ ಕಾಲಾವಕಾಶ ಸಿಗಲಿದ್ದು, ಆರು ತಿಂಗಳಾದರು ಪರಾಗಿಲ್ಲ ನಮಗೆ ಅಧಿಕಾರ ಬೇಕು ಎನ್ನುವ ಸದಸ್ಯರ ಸಂಖ್ಯೆ ಕಮಲ ಪಾಳಯದಲ್ಲಿ ಹೆಚ್ಚಾಗಿತ್ತು. ಚುನಾವಣೆಯ ಕೊನೆಯ ಕ್ಷಣದವರೆಗೆ ಸದಸ್ಯರು ಪೈಪೋಟಿ ನಡೆಸಿದರು. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮೀ ಕಣ್ಣೀರು ಹಾಕಿದರು. ನಾಮ ಪತ್ರ ವಾಪಸ್ ಪಡೆದು ಅವಕಾಶ ಸಿಗದೆ ಇರುವುದಕ್ಕೆ ಅಸಮಾಧಾನ ಹೊರ ಹಾಕಿದರು. ಅಷ್ಟೇ ಅಲ್ಲದೆ ಶಾಸಕ ಸತೀಶ್ ರೆಡ್ಡಿ ಮತ್ತು ಗುರುಮೂರ್ತಿ ತಮ್ಮವರಿಗೆ ಅವಕಾಶ ಕೊಡಲಿಲ್ಲ ಎಂದು ಆರ್.ಅಶೋಕ್ ಬಳಿ ಅಸಮಾಧಾನ ಹೊರಹಾಕಿದರು. ಇದಕ್ಕೆ ಆರ್.ಅಶೋಕ್ ಅವರು ಕರ್ಣನಂತೆ ನಾ ದಾನಿಯಾದೆ ಅಂತ ಹಾಡಿ ಸುಮ್ಮನಾದರು.
ಜೆಡಿಎಸ್, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬೆಂಬಲಿಸಿದ ಮೂವರಿಗಷ್ಟೇ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಉಳಿದಂತೆ ಹೆಚ್ಚು ಅನುದಾನ ನೀಡುವುದಾಗಿ ಹೇಳಿ ಸಮಾಧಾನಪಡಿಸಿದ್ದಾರೆ. ಮುಂದಿನ ವಾರ ಅಧಿಕೃತ ಘೋಷಣೆಯಾಗಲಿರುವ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದ ಪಟ್ಟಿ ಹೀಗಿದೆ.
1) ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ನಾರಾಯಣಸ್ವಾಮಿ
2) ನಗರಯೋಜನೆ- ಆಶಾ ಸುರೇಶ್
3) ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಎಲ್ ಶ್ರೀನಿವಾಸ್
4) ಅಪೀಲು ಸ್ಥಾಯಿ ಸಮಿತಿ- ಗುಂಡಣ್ಣ (ಲಕ್ಷ್ಮೀನಾರಾಯಣ)
5) ಸಾಮಾಜಿಕ ನ್ಯಾಯ ಸಮಿತಿ- ಹನುಮಂತಯ್ಯ
6) ವಾರ್ಡ್ ಕಾಮಗಾರಿ ಸಮಿತಿ- ಜಿಕೆ ವೆಂಕಟೇಶ್
7) ಬೃಹತ್ ರಸ್ತೆ ಕಾಮಗಾರಿ- ಮೋಹನ್ ಕುಮಾರ್
8) ಲೆಕ್ಕಪತ್ರ- ಮಮತಾ ಶರವಣ
9) ಆರೋಗ್ಯ ಸ್ಥಾಯಿ ಸಮಿತಿ -ಮಂಜುನಾಥ್ ರಾಜು
10) ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ- ಅರುಣಾ ರವಿ
11) ತೋಟಗಾರಿ- ಉಮಾದೇವಿ
12) ಮಾರುಕಟ್ಟೆ- ಪದ್ಮಾವತಿ
ಒಟ್ಟಾರೆ ಸ್ಥಾಯಿ ಸಮಿತಿಗಳ ರಚನೆಯಾಗದೆ ಬಿಬಿಎಂಪಿಯಿಂದ ಅಭಿವೃದ್ಧಿ ಕಾಮಗಾರಿಗಳು, ಸಾಕಷ್ಟು ಯೋಜನೆಗಳು ಸ್ಥಗಿತಗೊಂಡಿದ್ದವು. ಇನ್ನಾದರೂ ಸ್ಥಾಯಿ ಸಮಿತಿಗಳು ಬೇಗ ಕಾರ್ಯಪ್ರವೃತ್ತರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.